ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿಗೆ ಸಮೀಪದ ಹೆಮ್ಮಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೊಬ್ಬ ದೇವರಿಗೆ ಕೈ ಮುಗಿದು, ದೇವರ ಪ್ರಸಾದವನ್ನು ಸಂಪ್ರದಾಯದಂತೆ ಪ್ರಸಾದ ಹಚ್ಚಿ, ದೇವರ ಡಬ್ಬಿಯನ್ನೇ ದೋಚಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಶನಿವಾರ ನಸುಕಿನ ಜಾವ ಸುಮಾರು 2.45 ಸುಮಾರಿಗೆ ದೇವಸ್ಥಾನದ ಹಿಂಬದಿಯ ಜನರೇಟರ್ ರೂಮಿನ ಪಕ್ಕದ ಬಾಗಿಲಿನ ಸ್ಕ್ರೂ ತೆಗೆದು ಒಳನುಗ್ಗಿದ ಕಳ್ಳ. ಸುತ್ತು ಪೌಳಿ ಪ್ರವೇಶಿಸಿ ಒಳಬಂದಿದ್ದಾನೆ. ಚಪ್ಪಲಿ, ಕನ್ನಡಕ, ಕೈಗೆ ಕೈಗವಸು ಧರಿಸಿ ಒಳಬಂದಿದ್ದ ಸುಮಾರು 35ರಿಂದ 40 ವಯಸ್ಸಿನ ಆಸುಪಾಸಿನಲ್ಲಿದ್ದ ಆತ, ದೇವರ ಗರ್ಭಗುಡಿಯ ಮುಂಭಾಗದಲ್ಲಿ ದೇವರಿಗೆ ನಮಸ್ಕರಿಸಿದ್ದಾನೆ. ಹಿಂದೂ ಸಂಪ್ರದಾಯದಂತೆ ಉಂಗುರ ಬೆರಳಿನಲ್ಲಿ ಹರಿವಾಣದಲ್ಲಿದ್ದ ಕುಂಕುಮ ತೆಗೆದು ಹಣೆಗೆ ಧರಿಸಿಕೊಂಡಿದ್ದಾನೆ. ಬಳಿಕ ಕಾಣಿಕರ ಹುಂಡಿಯ ಬಳಿ ಬಂದ ಆತ ಲೀಲಾಜಾಲವಾಗಿ ಕಾಣಿಕೆ ಡಬ್ಬಿ ಒಡೆದು ಹಣ ದೋಚಿದ್ದಾನೆ. ಅಲ್ಲದೇ ತಿಂಗಳ ಸತ್ಯನಾರಾಯಣ ಪೂಜೆಗಾಗಿ ಸಂಗ್ರಹಿಸಿದ ಹಣದ ಹುಂಡಿಯನ್ನೂ ದೋಚಿದ್ದಾನೆ. ಅಂದಾಜು ಸುಮಾರು 40 ಸಾವಿರಕ್ಕೂ ಅಧಿಕ ನಗದು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗಷ್ಟೇ 7 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿದ್ದ ದೇವಸ್ಥಾನ ಇದಾಗಿದ್ದು, ಕಳವು ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳವು ಪ್ರಕರಣ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಕಳ್ಳನ ಹುಡುಕಾಟದಲ್ಲಿದ್ದಾರೆ.