ಕುಂದಾಪುರ ಮಿರರ್ ಸುದ್ದಿ…
ಸಾಲಿಗ್ರಾಮ: ಬೆಳ್ಳಂಬೆಳಿಗ್ಗೆ ಎದ್ದು ಗಂಡ ಹೆಂಡತಿ ಜಗಳವಾಡಿಕೊಂಡು ಗಲಾಟೆ ತಾರಕಕ್ಕೇರಿದ್ದಲ್ಲದೇ ಪತಿ ಪತ್ನಿಗೆ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿದ್ದಾರೆ ಎನ್ನಲಾದ ಘಟನೆ ಶುಕ್ರವಾರ 23ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಪಡುವಳಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಹಲ್ಲೆ ನಡೆಸಿದ್ದಾನೆನ್ನಲಾದ ಆರೋಪಿ ಪತಿಯನ್ನು ಬ್ರಹ್ಮಾವರ ತಾಲೂಕು ಸಾಸ್ತಾನ ಗುಂಡ್ಮಿ ನಿವಾಸಿ ಶ್ಯಾಮ್ ಉಪಾಧ್ಯಾಯ ಎಂಬುವರ ಪುತ್ರ ಕಿರಣ್ ಉಪಾಧ್ಯಾಯ (30) ಎಂದು ಗುರುತಿಸಲಾಗಿದೆ. ಕಿರಣನ ಪತ್ನಿ ಜಯಶ್ರೀ(28) ತಲೆಗೆ ಪೆಟ್ಟಾಗಿದ್ದು ಸಾವನ್ನಪ್ಪಿದ ದುರದೈವಿ ಎನ್ನಲಾಗಿದೆ.
9 ತಿಂಗಳ ಹಿಂದಷ್ಟೇ ಕಿರಣ ಉಪಾಧ್ಯಾಯ ಹಾಗೂ ಜಯಶ್ರೀ ವಿವಾಹವಾಗಿತ್ತೆನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಸಾಲಿಗ್ರಾಮ ಕಾರ್ಕಡ ಪಡುವಳಿಯ ಮನೆಯಲ್ಲಿ ಬಾಡಿಗೆಯಲ್ಲಿ ವಾಸ ಮಾಡಿಕೊಂಡಿದ್ದರು. ಸ್ಥಳೀಯರು ಗಂಡ ಹೆಂಡತಿ ಜಗಳ ಎನ್ನುತ್ತಿದ್ದು, ಇದರಿಂದಲೇ ಪತಿ ಪತ್ನಿಗೆ ಹಲ್ಲೆ ನಡೆಸಿದ್ದಾಗ ಪತ್ನಿ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ. ಜಯಶ್ರೀ ಮೃತ ದೇಹವನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.