ಕುಂದಾಪುರ ಮಿರರ್ ಸುದ್ದಿ…
ಬೈಂದೂರು:ಪುರಾಣ ಪ್ರಸಿದ್ಧ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವ ನ.20 ಶನಿವಾರ ನಡೆಯಿತು. ವರುಣನ ಆರ್ಭಟದ ನಡುವೆಯೂ ಕೂಡಾ ಧಾರ್ಮಿಕ ವಿಧಿವಿಧಾನದಂತೆ ರಥೋತ್ಸವ ಸಾಂಗವಾಗಿ ನಡೆಯಿತು.
ಉಪ್ಪುಂದ ರಥೋತ್ಸವವನ್ನು ಉಪ್ಪುಂದ ಕೊಡಿ ಹಬ್ಬ ಎಂದೂ ಕರೆಯಲಾಗುತ್ತದೆ. ಬೈಂದೂರು ಭಾಗದ ದೊಡ್ಡ ಹಬ್ಬ ಇದಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆಯುತ್ತಾರೆ. ಕಳೆದ ಬಾರಿ ಕೊರೋನಾದಿಂದ ಕಳೆಗುಂದಿದ ರಥೋತ್ಸವ ಈ ವರ್ಷ ಕೋವಿಡ್ ನಿಯಮ ಪಾಲಿಸಿಕೊಂಡು ರಥೋತ್ಸವ ನಡೆಸಲು ಸನ್ನದ್ಧಗೊಂಡಿತ್ತು. ಆದರೆ ಅಕಾಲಿಕ ಮಳೆಯಿಂದಾಗಿ ಹಬ್ಬದ ಉತ್ಸಾಹಕ್ಕೆ ತೊಡಕ್ಕಾಯಿತು. ಆದರೆ ಧಾರ್ಮಿಕ ಪ್ರಕ್ರಿಯೆಗಳು, ಭಕ್ತಿ, ಧಾರ್ಮಿಕ ಆಚಾರ ವಿಚಾರಗಳಿಗೆ ಸಮಸ್ಯೆಯಾಗಲಿಲ್ಲ.
ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದೇವಳ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಗಣೇಶ ಗೌಡ, ಆಡಳಿತಾಧಿಕಾರಿ ಮತ್ತು ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ಕ್ಷೇತ್ರದ ತಂತ್ರಿಗಳು, ಅರ್ಚಕರು, ಸಿಬ್ಬಂದಿ ವರ್ಗದವರು, ಹತ್ತು ಊರ ಸಮಸ್ತರು ಉಪಸ್ಥಿತರಿದ್ದರು.ಕ್ಷೇತ್ರದ ತಂತ್ರಿಗಳಿಂದ ಧಾರ್ಮಿಕ ವಿಧಿವಿಧಾನಗಳು ನಡೆದವು.
ನ.15ರಿಂದಲೇ ಧ್ವಜಾರೋಹಣದೊಂದಿಗೆ ರಥೋತ್ಸವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಶನಿವಾರ ರಥೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನ.21ರಂದು ಚೂರ್ಣೋತ್ಸವ ನಡೆಯಲಿದೆ. ನ.22ರಂದು ಧ್ವಜಾವರೋಹಣ ಮತ್ತು ನಗರೋತ್ಸವ ನಡೆಯಲಿದೆ.