ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ತಾರ್ಕಣಿ’ ಆ.31ಮತ್ತು ಸೆ.1ರಂದು ಬಿದ್ಕಲ್‍ಕಟ್ಟೆಯ ಕೆ.ಪಿಎಸ್ ಸಭಾಂಗಣದ ಮೊಳಹಳ್ಳಿ ಶಿವರಾವ್ ವೇದಿಕೆಯಲ್ಲಿ ನಡೆಯಲಿದೆ. ಆಗಸ್ಟ್ 31 ಶನಿವಾರ ಸಂಜೆ 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ ಆಳ್ವ ಉದ್ಘಾಟನೆ ನೆರವೇರಿಸಲಿದ್ದಾರೆ. 5.30ರಿಂದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ವೈದೇಹಿ ರಚಿಸಿದ ನಾಟಕ ‘ನಾಯಿಮರಿ’ ಪ್ರದರ್ಶನಗೊಳ್ಳಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ.ಉಮೇಶ ಪುತ್ರನ್ ಹೇಳಿದರು.
ಅವರು ಶುಕ್ರವಾರ ಕುಂದಾಪುರ ಪ್ರೆಸ್‍ಕ್ಲಬ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಸೆಪ್ಟೆಂಬರ್ 1ರಂದು ಪೂರ್ವಾಹ್ನ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ಮೊಳಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಎಂ.ಚಂದ್ರಶೇಖರ ಶೆಟ್ಟಿ ನೆರವೇರಿಸಲಿದ್ದಾರೆ. ಪರಿಷತ್ತು ಧ್ವಜಾರೋಹಣವನ್ನು ಕಸಾಪ ಕುಂದಾಪುರ ಘಟಕದ ಅಧ್ಯಕ್ಷರಾದ ಡಾ.ಉಮೇಶ ಪುತ್ರನ್ ನೆರವೇರಿಸಲಿದ್ದಾರೆ. ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಮ್ಮೇಳನವನ್ನು ಶಾಸಕ ಎ.ಕಿರಣ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷತೆಯನ್ನು ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ವಹಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ಪುಸ್ತಕ ಬಿಡುಗಡೆ, ಪುಸ್ತಕ ಮಳಿಗೆ ಉದ್ಘಾಟನೆ ನಡೆರಯಲಿದೆ. ಈ ಸಂದರ್ಭದಲ್ಲಿ ಮೂಡುಬಿದಿರೆಯ ಎಸ್.ಕೆ.ಎಫ್‍ನ ಆಡಳಿತ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್ಯ ಅವರಿಗೆ ವಿಶೇಷ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.
ಪೂರ್ವಾಹ್ನ 11.30ರಿಂದ ‘ಕುಂದಾಪ್ರ ಕನ್ನಡದ ಹೊಸ ಸಾಧ್ಯತೆಗಳು ಗೋಷ್ಠಿ’ ನಡೆಯಲಿದೆ. ನಂತರ ಜನಪದ ಗೀತಗಾಯನ ನಡೆಯಲಿದೆ. ಅಪರಾಹ್ನ 1.ಗಂಟೆಯಿಂದ ಬಹುವಿಧ ಗೋಷ್ಠಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಚಿಣ್ಣರ ವೈವಿಧ್ಯೆ ನಡೆಯಲಿದೆ. ಅಪರಾಹ್ನ 3 ಗಂಟೆಯಿಂದ ಅಬ್ಬಿ ಭಾಷಿ ಗೋಷ್ಟಿ ನಡೆಯಲಿದೆ. ನಂತರ ಅಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು, 4.30ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಯಿಂದ ಜಾನಪದ ಸಾಂಸ್ಕøತಿಕ ವೈಭವ, ಜಾನಪದ ತಿಲ್ಲಾನ: ವೀರಗಾಸೆಯನ್ನು ಸಹನಾ ಯುವತಿ ಮಂಡಲ ಬೀಜಾಡಿ ಇವರು ಪ್ರಸ್ತುತ ಪಡಿಸಲಿದ್ದಾರೆ. ಎಕ್ಸಲೆಂಟ್ ಸಂಸ್ಥೆಯ ಪ್ರೌಢಶಾಲೆಯ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಜಾನಪದ ನೃತ್ಯಸಿರಿ ನಡೆಯಲಿದೆ. ಸಮ್ಮೇಳನಕ್ಕೆ ಕುಂದಾಪ್ರ ಕನ್ನಡದ ಪದ ತಾರ್ಕಣಿ ಎಂದು ಹೆಸರಿಡಲಾಗಿದೆ. ತಾರ್ಕಣಿ ಎಂದರೆ ಸಮನ್ವಯ ಎನ್ನುವ ಅರ್ಥ ಬರುತ್ತದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಮಹೇಶ ಹೆಗ್ಡೆ ಮೊಳಹಳ್ಳಿ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ ಯಡಾಡಿ-ಮತ್ಯಾಡಿ, ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ದಿನಕರ ಆರ್.ಶೆಟ್ಟಿ, ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.