ಕುಂದಾಪುರ :ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯು ವಿಲೀನಗೊಂಡರೆ ಆರ್ಥಿಕ ಶಕ್ತಿ ವೃದ್ಧಿ- ಸಂಸದ ಕೋಟ

0
148

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆಯು ವಿಲೀನಗೊಂಡರೆ ಈ ಭಾಗದ ಆರ್ಥಿಕ ಶಕ್ತಿಯು ವೃದ್ಧಿಸಲಿದೆ. ಇದರಿಂದ ಹೊಸ ರೈಲುಗಳ ಆರಂಭ ನಿಲುಗಡೆಗೂ ಅನುಕೂಲವಾಗಲಿದೆ. ನಿಲ್ದಾಣಗಳು ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಕೊಂಕಣ ರೈಲ್ವೆ ವ್ಯಾಪ್ತಿಯ ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಗೋವಾ ರಾಜ್ಯಗಳ ಸರಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಬುಧವಾರ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ, ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ರೈಲ್ವೆ ಇಲಾಖೆ, ಕೊಂಕಣ ರೈಲ್ವೆ ಅಧಿಕಾರಿಗಳು, ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ, ಹಂಗಳೂರು ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಸ್ಥೆಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಹಂಗಳೂರು ಲಯನ್ಸ್ ಕ್ಲಬ್‌ನವರು ಈ ನಿಲ್ದಾಣದ ಅಗತ್ಯ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗಿರುವುದು ಉತ್ತಮ ಕಾರ್‍ಯ. ಭವಿಷ್ಯದಲ್ಲಿ ವಿಲೀನ ಆದರೂ, ಈ ಕಾರ್‍ಯಗಳಿಗೆ ಯಾವುದೇ ತೊಂದರೆ ಆಗದಿರುವಂತೆ ನೋಡಿಕೊಳ್ಳಲಾಗುವುದು ಎಂದ ಅವರು, ರಾಜದಾನಿ ಹೊಸದಿಲ್ಲಿಗೆ ಸಂಪರ್ಕಿಸುವ ನಿಜಾಮುದ್ದೀನ್ ರೈಲು ನಿಲುಗಡೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಳಿ ಮಾತನಾಡಿದ್ದೇನೆ. ವಾರದೊಳಗೆ ಈ ಕ್ರಮ ಆಗಲಿದೆ. ಬೆಂಗಳೂರಿಗೆ ಹೊಸ ರೈಲು ಬೇಡಿಕೆಯೂ ಗಮನದಲ್ಲಿದೆ ಎಂದರು.

Click Here

ಕೊಂಕಣ ರೈಲ್ವೆಯ ಕಾರವಾರದ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ. ನಿಕ್ಕಂ ಮಾತನಾಡಿ, ರೈಲ್ವೆ ವಿಲೀನ ಅಥವಾ ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುವುದಿದ್ದರೂ, ಹಿಂದೆ ನಡೆದಿರುವ ಕಾಮಗಾರಿಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅದನ್ನು ಉಳಿಸಿಕೊಂಡು, ವಿಸ್ತರಣಾ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಹಂಗಳೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ರೋವನ್ ಡಿಕೊಸ್ತಾ, ಪ್ರೊ| ಬಾಲಕೃಷ್ಣ ಶೆಟ್ಟಿ ಹಾಗೂ ಸದಸ್ಯರು, ತಮ್ಮ ಕ್ಲಬ್‌ನ ವತಿಯಿಂದ ನಿಲ್ದಾಣದ ಮೇಲ್ಛಾವಣಿ, ನೆಲ ಹಾಸು ಕಾಮಗಾರಿಗಳ ಕುರಿತಂತೆ ಮಾಹಿತಿ ಹಂಚಿಕೊಂಡರು.

ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಪ್ರಸ್ತಾವಿಸಿ, ಈ ನಿಲ್ದಾಣದ ಅಗತ್ಯ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ದಾನಿಗಳು ಸಹಕಾರ ಕೊಡುತ್ತಿದ್ದು, ಈಗ ಹಂಗಳೂರು ಲಯನ್ಸ್ ಕ್ಲಬ್‌ನವರು ದೊಡ್ಡ ಮಟ್ಟದ ಅಭಿವೃದ್ಧಿ ಯೋಜನೆಗೆ ಮುಂದಾಗಿದ್ದಾರೆ. ನಿಲ್ದಾಣದಲ್ಲಿ ಇನ್ನಷ್ಟು ಶೆಲ್ಟರ್, ಶೌಚಾಲಯ, ಫ್ಲಾಟ್‌ಫಾರಂ ದುರಸ್ತಿ ಕಾರ್‍ಯ ಆಗಬೇಕಾಗಿದೆ ಎಂದರು.

ಕೊಂಕಣ ರೈಲ್ವೆಯ ಅಧಿಕಾರಿಗಳಾದ ದಿಲೀಪ್ , ವಿಜಯ ಕುಮಾರ್, ಬಿ.ಎಂ. ವೆಂಕಟೇಶ್, ಪಿಆರ್‌ಒ ಸು‘ ಕೃಷ್ಣಮೂರ್ತಿ, ಸಮಿತಿಯ ವಿವೇಕ್ ನಾಯಕ್, ಜಾಯ್ ಕರ್ವಾಲೋ, ಪ್ರವೀಣ್ ಕುಮಾರ್, ನಾಗರಾಜ್ ಆಚಾರ್, ರಾಘವೇಂದ್ರ ಶೇಟ್, ಉದಯ ಭಂಡಾರ್‌ರ್ಕರ್, ಸುಧಾಕರ ಶೆಟ್ಟಿ ಹುಂತ್ರಿಕೆ, ಮತ್ತಿತರರು ಉಪಸ್ಥಿತರಿದ್ದರು.

ವೆಲಂಕಣಿ – ಮಡಗಾಂವ್ ನಡುವೆ ವಿಶೇಷ ರೈಲು ಆರಂಭಕ್ಕೆ ಶ್ರಮಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕುಂದಾಪುರ ಭಾಗದ ಕ್ರೈಸ್ತ ಬಾಂಧವರು ಬುಧವಾರ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಸಮ್ಮಾನಿಸಿದರು. ಮುಂದಿನ ದಿನಗಳಲ್ಲಿ ವಾರದಲ್ಲಿ ಎರಡು ದಿನ ಈ ರೈಲನ್ನು ಸಂಚರಿಸಲು ಅನುವು ಮಾಡಿಕೊಡುವಂತೆ ಇದೇ ವೇಳೆ ಮನವಿ ಮಾಡಿಕೊಂಡರು. ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಅವರನ್ನು ಸಮ್ಮಾನಿಸಲಾಯಿತು.

LEAVE A REPLY

Please enter your comment!
Please enter your name here