ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೈಂದೂರು ಮಂಡಲ ಬಿಜೆಪಿ ವತಿಯಿಂದ ಬುಧವಾರ ಬೆಳಿಗ್ಗೆ ಕೊಲ್ಲೂರಿನ ಶ್ರೀ ಪುರಾಣಿಕ ಸಭಾ ಭವನದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿಯೇ ಅತೀ ಹೆಚ್ಚು ಮತಗಳನ್ನು ನೀಡಿದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದೇ ಇದ್ದರೂ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೇತೃತ್ವದಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಕಾಲುಸಂಕ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ದಾರಿ ದೀಪಗಳ ಸಮಸ್ಯೆಗಳು, ಕೃಷಿ ನೀರಾವರಿ ಹೀಗೇ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬೈಂದೂರಿನಿಂದ ರಾಣೆಬೆನ್ನೂರು ವರೆಗಿನ ರಾಷ್ಟ್ರೀಯ ಹೆದ್ದಾರಿ 766ಸಿ ಕಾಮಗಾರಿ ಆರಂಭಗೊಂಡಿದ್ದು ಇದರಿಂದ ಬೈಂದೂರು ಶಿವಮೊಗ್ಗ ಸಂಪರ್ಕ ಸುಧಾರಣೆಯಾಗಲಿದೆ ಎಂದರು. ಬಿಜೆಪಿ ಮೂರನೇ ಬಾರಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಜಗತ್ತಿನ ಅತೀ ದೊಡ್ಡ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಬೈಂದೂರು ಮಂಡಲದ 8 ಮಹಾಶಕ್ತಿಕೇಂದ್ರಕ್ಕೂ ಅಧ್ಯಕ್ಷರ ಆಯ್ಕೆ ನಡೆಸಲಾಗಿದ್ದು, ಪ್ರತೀ ಬೂತ್ ಮಟ್ಟದಲ್ಲೂ 25 ಪೇಜ್ ಪ್ರಮುಖರ ಆಯ್ಕೆ ನಡೆದಿದೆ. ಒಟ್ಟು 246 ಬೂತ್ ಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾಮಾಣಿಕವಾಗಿ ನಡೆಯುತ್ತದೆ. ಸಮಾಜಸೇವೆಯ ಜೊತೆಗೆ ಪಕ್ಷ ಸಂಘಟನೆಯ ಕಡೆಗೂ ಆದ್ಯತೆ ನೀಡಬೇಕು. ಜನ ಸೇವೆ ಬಿಜೆಪಿ ಉದ್ದೇಶವಾಗಿದೆ ಎಂದರು. ಸದಸ್ಯತ್ವ ಅಭಿಯಾನದ ಸಹಸಂಚಾಲಕಿ ಪ್ರಿಯದರ್ಶಿನಿ ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಆನಂದ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಬೈಂದೂರು ಮಂಡಲದ ಪ್ರ.ಕಾರ್ಯದರ್ಶಿ ಮಹೇಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.