ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮಕ್ಕಳ ಹಕ್ಕು, ರಕ್ಷಣೆ, ಸುರಕ್ಷತೆಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಆದ್ಯತೆ ವಹಿಸಬೇಕು. ಸರ್ಕಾರದ ಸುತ್ತೋಲೆಗಳನ್ನು ಸರಿಯಾಗಿ ಅನುಷ್ಠಾನಿಸಬೇಕು. ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು, ಮಕ್ಕಳ ರಕ್ಷಣಾ ಸಮಿತಿಯನ್ನು ಸದಾ ಕ್ರಿಯಾಶೀಲವಾಗಿರಬೇಕು, ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಚಲನಾವಲನಾ ವಹಿ ನಿರ್ವಹಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ತಿಪ್ಪೆಸ್ವಾಮಿ ಕೆ.ಟಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಮಕ್ಕಳ ರಕ್ಷಣಾ ವಿಚಾರದಲ್ಲಿ ಬಹುಮುಖ್ಯವಾಗಿದೆ. ನಾನು ಕೆಲವೊಂದು ಶಾಲಾ ಕಾಲೇಜು ಭೇಟಿ ಸಂದರ್ಭ ಕನಿಷ್ಠ ಮಕ್ಕಳ ಸಹಾಯವಾಣಿಯ ಸಂಖ್ಯೆಯನ್ನು ನಿಯಮಾನುಸಾರ ಅಳವಡಿಸಿಲ್ಲ. ಉಡುಪಿ ಜಿಲ್ಲೆ ಶಿಕ್ಷಣ ಮತ್ತು ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸುವ ಜಿಲ್ಲೆ ಎಂದೇ ನಾವು ಒಪ್ಪುತ್ತೇವೆ. ವಿದ್ಯಾಂಗ ಉಪ ನಿರ್ದೇಶಕರು, ಶಿಕ್ಷಣಾಧಿಕಾರಿಗಳು ಮಕ್ಕಳ ರಕ್ಷಣೆ ಹಕ್ಕುಗಳ ಬಗ್ಗೆ ಸರ್ಕಾರದ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಶಾಲೆಗಳಿಗೆ ಸೂಚನೆ ನೀಡಬೇಕು. ಮತ್ತು ಅದರ ಅನುಷ್ಠಾನವನ್ನು ಗಮನಿಸಬೇಕು. ಮಕ್ಕಳ ರಕ್ಷಣ ನೀತಿ 2016 ಅನುಷ್ಠಾನಗೊಂಡ ಬಳಿಕ 2023ರಲ್ಲಿ ಪರಿಷ್ಕರಣೆಗೊಂಡಿತು. ಆದರೂ ಕೂಡಾ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಸರಿಯಾಗಿಲ್ಲ ಎಂದರೆ ಗಂಭೀರವಾಗಿ ಪರಿಗಣಿಸಬೇಕಾದುದು ಎಂದರು.
ಶಿಕ್ಷಣದಿಂದ ಹೊರಗುಳಿದ ಮಕ್ಕಳು, ಅವರನ್ನು ಗುರುತಿಸುವಿಕೆ, ತಗೆದುಕೊಂಡ ಕ್ರಮ, ಮಕ್ಕಳ ಹಕ್ಕುಗಳ ಬಗ್ಗೆ ಅನುಷ್ಟಾನಿಸಿದ ಕಾರ್ಯಕ್ರಮಗಳ ಬಗ್ಗೆ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಖಾಸಗಿ ಶಾಲೆಯ ಶಾಲಾ ವಾಹನಗಳ ಚಾಲಕರ ಬಗ್ಗೆ ಗಮನ ಹರಿಸಬೇಕು, ಪೊಲೀಸ್ ಇಲಾಖೆ ಜಂಟಿಯಾಗಿ ಖಾಸಗಿ ಶಾಲಾ ವಾಹನಗಳ ಚಾಲಕರ ಸಭೆ ಕರೆಯಿರಿ, ಶಾಲಾ ವಾಹನದಲ್ಲಿ ಮಹಿಳಾ ಆಯಾ ಇರುವುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದು ಸೂಚಿಸಿದರು.
50 ಮಕ್ಕಳಿಗೆ ಒಂದು ಸಲಹಾ ಪೆಟ್ಟಿಗೆ ಇರಬೇಕು ಎನ್ನುವ ನಿಯಮವಿದೆ. ಸಿಸಿ ಕ್ಯಾಮರಾದ ಕಣ್ಗಾವಲು ಇಲ್ಲದ ಪ್ರದೇಶದಲ್ಲಿ ಸಲಹಾ ಪೆಟ್ಟಿಗೆ ಇಡಬೇಕು. ಮಕ್ಕಳ ರಕ್ಷಣಾ ಸಭೆಯಲ್ಲಿಯೇ ಸಲಹಾ ಪೆಟ್ಟಿಗೆ ತೆರೆಯಬೇಕು ಎಂದರು.
ಶಾಲೆ, ವಸತಿ ನಿಲಯಗಳಲ್ಲಿ ಮಕ್ಕಳ ಸಹಾಯವಾಣಿಯ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು, ಜೆರಾಕ್ಸ್ ಪ್ರತಿಯನ್ನು ಅಂಟಿಸಬಾರದು. ಪ್ರತೀ ಶಾಲೆಯಲ್ಲೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಮಕ್ಕಳ ರಕ್ಷಣೆಯ ವಿಚಾರದಲ್ಲಿ ಸೂಕ್ತ ತರಬೇತಿ ನೀಡಬೇಕು, ಪಾಲನೆ ಮಾಡದವರಿಗೆ ನೋಟಿಸ್ ನೀಡಿ ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಬಿಣಿಯಾಗುವುದು ಗಂಭೀರ ವಿಚಾರ. ಇದನ್ನು ತಡೆಯಬೇಕು. ತಾಲೂಕಿನಲ್ಲಿ 2 ಪ್ರಕರಣ ವರದಿಯಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಉಡುಪಿದು ಕಡಿಮೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು, ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು ಎಂದರು.
ಕಾರ್ಮಿಕ ಇಲಾಖೆ ಮಕ್ಕಳ ರಕ್ಷಣೆಯಲ್ಲಿ ನಿರ್ವಹಿಸುತ್ತಿರುವ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ಅವರು ತಾಲೂಕಿನಲ್ಲಿ 180 ಕಡೆ ಬಾಲಕಾರ್ಮಿಕರು ಇರುವ ಸಂದೇಹದ ಮೇಲೆ ದಾಳಿ ನಡೆಸಲಾಗಿ, 25 ಪ್ರಕರಣಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವುದು ಖಚಿತ ಪಟ್ಟಿದೆ. ಎಲ್ಲರೂ ಕೂಡಾ ಬೇರೆ ರಾಜ್ಯದಿಂದ ಬಂದವರು. ಚೋರಾಡಿಯಲ್ಲಿ ಕಾಮಗಾರಿ ಪ್ರದೇಶದಲ್ಲಿ ಬೇರೆ ರಾಜ್ಯದ ಕಾರ್ಮಿಕರೊಂದಿಗೆ 13 ಮಕ್ಕಳು ಇರುವುದು ಖಚಿತವಾಗಿ ಆ ಮಕ್ಕಳನ್ನು ಶಾಲೆಗೆ ದಾಖಲಿಸಿ, ಭಾಷೆ ವಿಚಾರದಲ್ಲಿ ಪ್ರತ್ಯೇಕ ಟ್ಯೂಷನ್ ನೀಡಲಾಗುತ್ತಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದರು.
ಕಾರ್ಮಿಕ ಇಲಾಖೆ ಬಾಲ ಕಾರ್ಮಿಕರನ್ನು ಗುರುತಿಸುವುದು ಮಾತ್ರವಲ್ಲ ಸೂಕ್ತ ಪುನರ್ವಸತಿ ಒದಗಿಸುವ ಕೆಲಸ ಮಾಡಬೇಕು, ಇ-ಶ್ರಮ್ ನೊಂದಣಿಯನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಸಾಕಷ್ಟು ವಿದ್ಯಾರ್ಥಿಗಳಿಗೂ ಅದರ ಪ್ರಯೋಜನ ಸಿಗುತ್ತಿದೆ ಎಂದರು.
ಗ್ರಾಮ ಪಂಚಾಯತ್‍ಗಳು ಕೂಡಾ ಮಕ್ಕಳ ರಕ್ಷಣೆ ವಿಚಾರದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ಮಕ್ಕಳ ಅಂಕಿಅಂಶವನ್ನು ಪ್ರದರ್ಶಿಸಬೇಕು. ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಸರಿಯಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣ ಕಾರ್ಯಪಡೆ ಇತ್ಯಾದಿಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಅನುಷ್ಠಾನಿಸಬೇಕು. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ಸುತ್ತೋಲೆಯಲ್ಲಿ ಇರುವುದನ್ನು ಅನುಷ್ಠಾನ ಮಾಡಲೆಬೇಕು ಎಂದರು.
ಸಭೆಯಲ್ಲಿ ತಹಶೀಲ್ದಾರ್ ಶೋಭಾಲಕ್ಷ್ಮೀ, ಜಿಲ್ಲಾ ಮಕ್ಕಳ ರಕ್ಷಣ ಅಧಿಕಾರಿ ನಾಗರತ್ನ, ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.