ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅತೀ ವೇಗದಿಂದ ಚಲಾಯಿಸುತ್ತಿದ್ದ ಶಾಲಾವಾಹನವೊಂದು ಬೈಕ್ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಚಾಲಕನ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸೇರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೆಕ್ಕಟ್ಟೆ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ವಾಹನದಲ್ಲಿದ್ದ ಇಬ್ಬರು ಮಹಿಳೆಯರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ಶಾಲಾವಾಹನ ಇದಾಗಿದ್ದು, ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಹೆದ್ದಾರಿಯಲ್ಲಿ ಬೈಕೊಂದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಹೈಮಾಸ್ಕ್ ವಿದ್ಯುತ್ ಕಂಬ ಮುರಿದುಬಿದ್ದಿದೆ. ಶಾಲಾವಾಹನದಲ್ಲಿ ವಿದ್ಯಾರ್ಥಿಗಳು ಇಲ್ಲದೇ ಇದ್ದಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.