ಯಡ್ತರೆ: ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

0
172

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕೆರೆಯಲ್ಲಿ ಈಜಲು ಹೋದ 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಬೈಂದೂರು ತಾಲೂಕು ಯಡ್ತರೆ ಗ್ರಾಮದ ಯೋಜನಾನಗರ ನಿವಾಸಿ ಕೂಲಿ ಕಾರ್ಮಿಕ ಕೃಷ್ಣ ದೇವಾಡಿಗ ಎಂಬುವರ ಮಗ ನಾಗೇಂದ್ರ (13) ಹಾಗೂ ಅಲ್ಲೇ ಸಮೀಪದ ನಿವಾಸಿ ಕಟ್ಟಡ ಸಾಮಾಗ್ರಿ ಪೂರೈಕೆ ಕೆಲಸ ಮಾಡಿಕೊಂಡಿರುವ ಬೈಂದೂರು ರೈಲ್ವೆ ನಿಲ್ದಾಣದ ಬಳಿಯ ಜಿ.ಎಂ ಕಂಪೌಂಡ್ ನಿವಾಸಿ ಶಾನು ಶಾಲಿಯಾನ್ ಎಂಬುವರ ಮಗ ಶಾನು ಮೊಹಮದ್ ಶಫಾನ್ (13) ಸಾವನ್ನಪ್ಪಿದ ಬಾಲಕರು.

Click Here

Click Here

ಬೈಂದೂರು ಸರಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು. ಇಬ್ಬರೂ ಜೊತೆಗೆ ಕಲಿಯುತ್ತಿದ್ದು ಕಲಿಕೆಯಲ್ಲಿ ಸಾಧಾರಣವಾಗಿದ್ದರು. ಶಾಲೆಯಲ್ಲಿ ಈಗ ಪರೀಕ್ಷೆ ನಡೆಯುತ್ತಿದ್ದು ಮಂಗಳವಾರ ಇಂಗ್ಲಿಷ್ ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿದ ಬಳಿಕ
ಸಂಜೆ 4 ಗಂಟೆ ಸುಮಾರಿಗೆ ನಾಗೇಂದ್ರ ಶಾನು ಮೊಹಮದ್ ಶಫಾನ್ ನ ಮನೆಗೆ ಬಂದು ಆತನನ್ನು ಕರೆದುಕೊಂಡು ಬೈಂದೂರು ಸೇನೇಶ್ವರ ದೇವಸ್ಥಾನದ ಹಿಂಬದಿಯ ಕೆರೆಕಟ್ಟೆ ಎಂಬ ಕೆರೆಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ.

ರಾತ್ರಿಯಾದರೂ ವಿದ್ಯಾರ್ಥಿಗಳು ಮನೆಗೆ ಬಾರದೇ ಇದ್ದಾಗ ಕೆರೆ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಬಳಿ ಒಂದು ಸೈಕಲ್, ಬಟ್ಟೆ ಹಾಗೂ ಎರಡು ಜೊತೆ ಚಪ್ಪಲಿ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬುಧವಾರ ಬೆಳಿಗ್ಗೆ ಸುಮಾರು 01:30 ಗಂಟೆಗೆ ಶಾನು ಮೊಹಮದ್ ಶಫಾನ್ ಹಾಗೂ 02:25 ಗಂಟೆಗೆ ನಾಗೇಂದ್ರ ದೇವಾಡಿಗ ರವರ ಮೃತ ದೇಹ ಪತ್ತೆಯಾಗಿದೆ.

ಕೆರೆಕಟ್ಟೆ ಕೆರೆಯು ಮಧ್ಯದಲ್ಲಿ 40 ಅಡಿ ಹಾಗೂ ಸುತ್ತಲೂ 10-20 ಅಡಿ ಆಳವಿದೆ. ಈ ಕೆರೆಯಲ್ಲಿ ಪ್ರತಿ ದಿನ ಊರಿನವರು ಈಜಲು ಬರುತ್ತಿರುತ್ತಾರೆ. ಮಂಗಳವಾರ ದಿನ ಮಳೆ ಇದ್ದುದರಿಂದ ಯಾರು ಈಜಲು ಬಂದಿರಲಿಲ್ಲ ಎನ್ನಲಾಗಿದೆ. ಸರಿಯಾಗಿ ಈಜಲು ಬಾರದ ಇಬ್ಬರು ಈಜಲು ಹೋದಾಗ ಮುಳುಗಿ ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಇಬ್ಬರ ಮೃತ ದೇಹಗಳನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಡಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here