ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಉಡುಪಿ ಜಿಲ್ಲೆಯ ಕುಂದಾಪುರದ ಕುಂದಪ್ರಭ ಪತ್ರಿಕೆ ಸಂಪಾದಕ ಯು.ಎಸ್. ಶೆಣೈ (ಯು.ಸುರೇಂದ್ರ ಶೆಣೈ) ಅವರನ್ನು ಆಯ್ಕೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಮೂಲತ: ಕುಂದಾಪುರ ತಾಲೂಕಿನ ಗಂಗೊಳ್ಳಿಯವರಾದ ಯು.ಎಸ್.ಶೆಣೈ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಅನುಭವ ಹೊಂದಿದ್ದಾರೆ. ಮೈಸೂರು ವಿ.ವಿ.ಯಿಂದ ಪತ್ರಿಕೋದ್ಯಮ ತರಬೇತಿಯನ್ನು ಪಡೆದುಕೊಂಡಿದ್ದ ಇವರು 1980ರಲ್ಲಿ ನವಭಾರತ ಪತ್ರಿಕೆಯ ಪತ್ರಿಕಾ ವರದಿಗಾರರಾಗಿ ಸೇವೆಯನ್ನು ಆರಂಭಿಸಿದ್ದರು. ಇಂಡಿಯನ್ ಎಕ್ಸಪ್ರೆಸ್, ಮುಂಗಾರು, ಹೊಸದಿಗಂತ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. 1991ರಲ್ಲಿ ಕುಂದಾಪುರ ತಾಲೂಕಿನ ಪ್ರಥಮ ಪತ್ರಿಕೆ ಕುಂದಪ್ರಭ ವಾರಪತ್ರಿಕೆಯನ್ನು ಪ್ರಾರಂಭಿಸಿ ಹಲವು ಯುವಕರಿಗೆ ಪತ್ರಕರ್ತರಾಗುವಂತೆ ಪ್ರೇರಣೆ ನೀಡಿದರು. ಉಡುಪಿ ಜಿಲ್ಲೆಯಾದ ಬಳಿಕ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿದ್ದರು. ಕುಂದಪ್ರಭ ಟ್ರಸ್ಟ್ ಹಾಗೂ ಜೈ ಕೊಂಕಣಿ ಸಂಸ್ಥೆಯ ಅಧ್ಯಕ್ಷರಾಗಿರುವ ಇವರು ಪಂಚಗಂಗಾವಳಿ ಉತ್ಸವ ಸಮಿತಿಯ ಸಂಚಾಲಕರಾಗಿ ದುಡಿದಿದ್ದರು.
ಅಖಿಲ ಭಾರತ ಕೊಂಕಣಿ ಪರಿಷತ್ ಸಮ್ಮೇಳನ, ರಾಜ್ಯ ಮಟ್ಟದ ಕೊಂಕಣಿ ಸಮ್ಮೇಳನ, ಕುಂದ ಕರಾವಳಿ ಉತ್ಸವ, ಪಂಚಗಂಗಾವಳಿ ಉತ್ಸವ ಸಹಿತ ಅನೇಕ ಸಮ್ಮೇಳನಗಳನ್ನು ಸಂಘಟಿಸಿದ ಕೀರ್ತಿ ಇವರದ್ದಾಗಿದೆ. ಯಕ್ಷಗಾನ, ಕಲೆ, ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಆಸಕ್ತಿ ಹೊಂದಿರುವ ಇವರು, ಕುಂದಾಪುರ ತಾಲೂಕಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.