ಕುಂದಾಪುರ ಮಿರರ್ ಸುದ್ದಿ…
ಶಿವಮೊಗ್ಗ: ಕೇಂದ್ರ ಭೂಸಾರಿಗೆ ಮಂತ್ರಾಲಯದ ಡೈರೆಕ್ಟರ್ ಜನರಲ್ ದರ್ಮೇಂದ್ರ ಸಾರಂಗಿಯವರ ಜೊತೆ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ ವೈ ರಾಘವೇಂದ್ರ ಸಭೆ ನಡೆಸಿದರು.
ಶುಕ್ರವಾರ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ರಾಷ್ಠ್ರೀಯ ಹೆದ್ದಾರಿ ಕಾಮಗಾರಿಗಳ ಪರಿವೀಕ್ಷಣೆಗೆ ಭೇಟಿ ನೀಡಿದ ಸಂದರ್ಭ ಅವರೊಂದಿಗೆ ಮಾತುಕತೆ ನಡೆಸಿದ ಸಂಸದ ರಾಘವೇಂದ್ರ ಕ್ಷೇತ್ರದಲ್ಲಿ ಅಭಿವೃದ್ದಿಯಾಗುತ್ತಿರುವ ಹಾಗು ಆಗಬೇಕಾದ ಪ್ರಮುಖ ಕಾಮಗಾರಿಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.
ಈ ಸಂದರ್ಬದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳಾದ ಸಿಗಂದೂರು ಸೇತುವೆ, ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ರಸ್ತೆ, ಹಾಗೂ ಸಾಗರ ಪಟ್ಟಣದ ಚತುಷ್ಪಥ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಚರ್ಚಿಸಿದರು. ಹಾಗೂ ಟೆಂಡರ್ ಪ್ರಕ್ರಿಯೆ ಮುಗಿದಿರುವ ಕಾಮಗಾರಿಗಳಾದ ಶಿವಮೊಗ್ಗ-ಆನಂದಪುರ 4 ಪಥದ ರಸ್ತೆ, ನೆಲ್ಲಿಸರದಿಂದ–ತೀರ್ಥಹಳ್ಳಿವರೆಗಿನ 4 ಪಥದ ರಸ್ತೆ, ಬೈಂದೂರು-ನಾಗೋಡಿವರೆಗಿನ ದ್ವಿಪಥ ರಸ್ತೆ, ಹಾಗು ಹೊಸೂರು ಮತ್ತು ತಾಳಗುಪ್ಪ ರೈಲ್ವೇ ಮೇಲ್ಸೇತುವೆ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
2024-25 ನೇ ಸಾಲಿಗೆ ಮಂಜೂರಾದ ಕಾಮಗಾರಿಗಳಾದ ಆಗುಂಬೆ ರಸ್ತೆ, ಆನಂದಪುರದಿಂದ ತಾಳಗುಪ್ಪ ವರೆಗಿನ ರಸ್ತೆ, ಸಾಗರದಿಂದ ಮರಕುಟಕವರೆಗಿನ ರಸ್ತೆ ಹಾಗು ಬೈಂದೂರಿನಿಂದ ರಾಣೆಬೆನ್ನೂರುವರೆಗಿನ ಬಾಕಿ ಉಳಿದಿರುವ ರಸ್ತೆಗಳ ಡಿ.ಪಿ.ಆರ್ ಗಳಿಗೆ ಮಂಜೂರಾತಿ ಪಡೆಯುವ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು. ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ ಆಗುಂಬೆ ಘಾಟಿಗೆ ಪರ್ಯಾಯವಾಗಿ 4 ಪಥದ ಟನಲ್ ರಸ್ತೆಯ ಡಿಪಿಆರ್ ತಯಾರಿಸುವ ಸಂಬಂಧ ಕಾರ್ಯ ಸಾದ್ಯತೆ ವರದಿಯನ್ನು ತಯಾರಿಸಿ ಸಲ್ಲಿಸಲು ಸಹ ರಾಷ್ಠ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಠ್ರೀಯ ಹೆದ್ದಾರಿ ಕಾಮಗಾರಿಗಳ ಅಭಿವೃದ್ದಿಯ ವೇಗ ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಡೈರೆಕ್ಟರ್ ಜನರಲ್ ಧರ್ಮೇಂದ್ರ ಸಾರಂಗಿ ರವರಿಗೆ ಕ್ಷೇತ್ರದ ಜನತೆಯ ಪರವಾಗಿ ಸಂಸದರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಕೇಂದ್ರ ಭೂಸಾರಿಗೆ ಮಂತ್ರಾಲಯದ ರೀಜನಲ್ ಆಫೀಸರ್ ನರೇಂದ್ರ ಶರ್ಮಾ, ರಾಷ್ಟ್ರೀಯ ಹೆದ್ದಾರಿ ಅಧೀಕ್ಷಕ ಇಂಜಿನಿಯರ್ ರಾಜೇಶ್, ಕಾರ್ಯಪಾಲಕ ಇಂಜಿನಿಯರ್ ದಿವಾಕರ ಹಾಜರಿದ್ದರು.