ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ರಜತ ಮಹೋತ್ಸವದ ಸಂದರ್ಭದಲ್ಲಿ ರೂಬಿಕ್ಸ್ ಕ್ಯೂಬ್ ಮೂಲಕ ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನು ಕಳೆದ ಶೈಕ್ಷಣಿಕ ವರ್ಷದಲ್ಲಿ ಮಾಡಿದ್ದು ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮವನ್ನು ಸೆ.30ರಂದು ಸಂಸ್ಥೆಯ ಶಾಲೆಯ ಡಾ.ಹೆಚ್.ಶಾಂತಾರಾಮ ರಂಗ ಮಂಟಪದಲ್ಲಿ ನಡೆಯಿತು.
ಗೌರವ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಮಾಜಿ ಸದಸ್ಯರು, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮಾತನಾಡಿ ಶಿಕ್ಷಣದ ಜೊತೆ ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಮಥ್ರ್ಯವನ್ನು ಬಿಂಬಿಸುವ ಕೆಲಸಗಳು ಆಗಬೇಕು. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಪ್ರಕಟಗೊಳ್ಳಬೇಕು. ಆ ಹಿನ್ನೆಲೆಯಲ್ಲಿ ಗಿನ್ನಿಸ್ ದಾಖಲೆಯನ್ನು ಮಾಡುವಂತೆ ಪ್ರೇರೆಪಿಸಿರುವುದು ಮಹತ್ತರವಾದ ಕಾರ್ಯ. ಹಟ್ಟಿಯಂಗಡಿಯ ಈ ಪ್ರಶಾಂತ ವಾತಾವರಣದಲ್ಲಿ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಲ್ಲಿ ಪರಿಣಾಮಕಾರಿ ಪ್ರಯತ್ನಗಳನ್ನು ಮಾಡುತ್ತಾ ಇದೆ ಎನ್ನುವುದಕ್ಕೆ ಐಬೆಕ್ಸ್ ಕ್ಯೂಬ್ ಬಳಸಿ ವಿಶ್ವದಾಖಲೆ ಮಾಡಿರುವುದು ಸಾಕ್ಷಿಯಾಗಿದೆ. ಇನ್ನೂ ದೊಡ್ಡ ದೊಡ್ಡ ಸಾಧನೆ ಮಾಡುವ ಛಲ, ಧೈರ್ಯ ಇಂಥಹ ಪ್ರಕ್ರಿಯೆಗಳಿಂದ ಬೆಳೆಯುತ್ತದೆ. ಸ್ಪಷ್ಟ ಗುರಿ, ಅರಿವು, ಛಲ ಮೂಡುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರ ಇದರ ಅಧ್ಯಕ್ಷರಾದ ವಸಂತ ಗಿಳಿಯಾರ್ ಮಾತನಾಡಿ, ಗಿನ್ನಿಸ್ ದಾಖಲೆಯ ಪ್ರಕ್ರಿಯೆಗಳು ಮಾಡಬೇಕಾದರೆ ಸುಮಾರು 35 ಲಕ್ಷ ತನಕ ಹಣ ಬೇಕಾಗುತ್ತದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೋಸ್ಕರ ಇಷ್ಟೊಂದು ದೊಡ್ಡ ಮೊತ್ತವನ್ನು ವ್ಯಯಿಸುವುದು ಅಪರೂಪ. ಹಡ್ಡಿಯಂಗಡಿಯ ಈ ವಿದ್ಯಾಸಂಸ್ಥೆ ಅಂತಹ ಕಾರ್ಯವನ್ನು ಮಾಡಿದೆ. ಆ ಮೂಲಕ ಗಿನ್ನಿಸ್ ದಾಖಲೆ ಮಾಡುವ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳ ಜೀವನದ ಉದ್ದಕ್ಕೂ ಈ ಸಾಧನೆ ಅಮೂಲ್ಯ ಕ್ಷಣವಾಗಿ ಉಳಿಯುತ್ತದೆ. ಇಲ್ಲಿ ನೀಡುವ ಗಿನ್ನಿಸ್ ದಾಖಲೆಯ ಪ್ರಮಾಣಪತ್ರ ನಿಮ್ಮ ಮಕ್ಕಳಿಗೂ ಸ್ಪೂರ್ತಿ ಉಂಟು ಮಾಡುತ್ತದೆ. ಮುಂದೆ ನಿಮ್ಮ ಮಕ್ಕಳು ಈ ಸರ್ಟಿಫಿಕೆಟ್ ನೋಡಿ ಹೆಮ್ಮೆ ಪಡುತ್ತಾರೆ ಎಂದರು.
ಎಸ್.ಎಸ್.ಎಸ್ ಟ್ರಸ್ಟ್ ಹಟ್ಟಿಯಂಗಡಿ ಇದರ ಅಧ್ಯಕ್ಷರಾದ ಹೆಚ್.ಗಣೇಶ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಭೂಮಾಪನ ಇಲಾಖೆಯ ಎಡಿಎಲ್‍ಆರ್ ಪುಷ್ಪರಾಜ ಪೂಜಾರಿ, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ರಾಜೀವ ಶೆಟ್ಟಿ ಭಾಗವಹಿಸಿದ್ದರು.
ಎಸ್.ಎಸ್.ಎಸ್ ಪ್ರತಿಷ್ಠಾನ ಹಟ್ಟಿಯಂಗಡಿ ಇದರ ಟ್ರಸ್ಟಿ , ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯ ಆಡಳಿತಾಧಿಕಾರಿ ವೀಣಾರಶ್ನಿ ಎಂ ಉಪಸ್ಥಿತರಿದ್ದರು.
ಎಸ್.ಎಸ್.ಎಸ್ ಪ್ರತಿಷ್ಠಾನ ಹಟ್ಟಿಯಂಗಡಿ ಇದರ ಕಾರ್ಯದರ್ಶಿ, ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ತರಬೇತಿ ನೀಡಿದ ಶಿಕ್ಷಕರಾದ ಶಿವಾನಂದ ಹಾಗೂ ಅಶ್ವಿನಿ ಅವರನ್ನು ಸನ್ಮಾನಿಸಲಾಯಿತು. ಸಹಶಿಕ್ಷಕಿ ರಂಜಿತ ಗಿನ್ನಿಸ್ ದಾಖಲೆ ಮಾಡಿದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಜಗದೀಶ ಕಾರ್ಯಕ್ರಮ ನಿರ್ವಹಿಸಿ, ವಿದ್ಯಾರ್ಥಿನಿ ಅನುಪ್ರಿಯ ಸ್ವಾಗತಿಸಿದರು. ವಿದ್ಯಾರ್ಥಿ ಯಶ್ ವಂದಿಸಿದರು.