ಮುಳ್ಳಿಕಟ್ಟೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಸಮರ್ಪಕ – ಗ್ರಾಮಸ್ಥರಿಂದ ಆಕ್ರೋಶ

0
69

ಕುಂದಾಪುರ ಮಿರರ್ ಸುದ್ದಿ…

ಗಂಗೊಳ್ಳಿ : ಹೊಸಾಡು ಗ್ರಾಮ ಪಂಚಾಯತಿಯ ಮುಳ್ಳಿಕಟ್ಟೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-66ರ ಅಗಲೀಕರಣದ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದ ಜನರು ಹೈರಾಣಾಗಿದ್ದು, ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಮುಳ್ಳಿಕಟ್ಟೆ ಜಂಕ್ಷನ್‍ನಲ್ಲಿ ಪ್ರತಿನಿತ್ಯವೆಂಬಂತೆ ಅಪಘಾತಗಳು ನಡೆಯುತ್ತಿದೆ. ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಮುಳ್ಳಿಕಟ್ಟೆ-ಅರಾಟೆ ಗ್ರಾಮದ ಮುಖಂಡ ಪ್ರದೀಪ ಶೆಟ್ಟಿ ಆಗ್ರಹಿಸಿದ್ದಾರೆ.

ಹೊಸಾಡು ಗ್ರಾಮ ಪಂಚಾಯತ್ ವಠಾರದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆದ್ದಾರಿ ಅಗಲೀಕರಣದಿಂದಾಗಿ ಇಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲ. ಹೆದ್ದಾರಿ, ಗೇರು ನಿಗಮ ಜಾಗದ ನೀರು, ಖಾಸಗಿ ವ್ಯಕ್ತಿಯೊಬ್ಬರ ಜಾಗದ ನೀರು, ಮೊವಾಡಿ ಕಡೆಯಿಂದ ಬರುವಂತಹ ಮಳೆ ನೀರನ್ನೆಲ್ಲ ಹೊಸಾಡು ಕಡೆಗೆ ಬಿಡುತ್ತಿದ್ದು, ಇದರಿಂದ ಕೆಲ ದಿನ ಹಿಂದೆ 7-8 ಮನೆಗಳಿಗೆ ಕಂಪೌಂಡ್‍ಗೆ ಹಾನಿಯಾಗಿದೆ. ಬಾವಿ ನೀರು ಕಲುಷಿತಗೊಂಡಿದೆ. 250 ಎಕರೆ ಕೃಷಿ ಭೂಮಿಗೂ ತೊಂದರೆಯಾಗುತ್ತಿದೆ. ಕೆಲವರು ಈ ಸಮಸ್ಯೆಯಿಂದ ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಮುಳ್ಳಿಕಟ್ಟೆ, ಅರಾಟೆ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲದೆ ಪ್ರತೀ ಮಳೆಗೂ ಆವಾಂತರ ಸೃಷ್ಟಿಯಾಗುತ್ತಿದೆ. ಹೆದ್ದಾರಿ ಕಾಮಗಾರಿ ನಿರ್ವಹಿಸುವವರು ಮೊವಾಡಿಯಿಂದ ಅರಾಟೆಯ ಸೌಪರ್ಣಿಕ ನದಿಯವರೆಗೆ ಸಮರ್ಪಕ ಕಾಂಕ್ರೀಟ್ ಚರಂಡಿ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

Click Here

Click Here

ಹೊಸಾಡು ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಕೆ. ಚಂದ್ರಶೇಖರ ಪೂಜಾರಿ ಮಾತನಾಡಿ, ಗ್ರಾಮಸ್ಥರು ಗ್ರಾ.ಪಂ., ವಿಎ ಕಚೇರಿ, ಪಡಿತರ, ಅಂಚೆ ಕಚೇರಿ ಹೀಗೆ ಎಲ್ಲದಕ್ಕೂ ಹೆದ್ದಾರಿ ದಾಟಿ ಬರಬೇಕಾಗಿದೆ. ಆದರೆ ಇಲ್ಲಿನ ಜಂಕ್ಷನ್ ಅಪಾಯಕಾರಿಯಾಗಿದೆ. ಸಮರ್ಪಕ ಸರ್ವಿಸ್ ರಸ್ತೆ ನಿರ್ಮಿಸಿಕೊಡುವಂತೆ ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಈವರೆಗೆ ಸ್ಪಂದನೆ ದೊರೆತಿಲ್ಲ. ಈ ಎಲ್ಲದರ ಬಗ್ಗೆ ನಾವು ಸಂಸದರು, ಡಿಸಿಯವರಿಗೆ ಮನವಿ ಸಲ್ಲಿಸಲಾಗುವುದು. ಆಗಲೂ ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಒಂದು ದಿನ ಗ್ರಾಮಸ್ಥರೆಲ್ಲ ಸೇರಿ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಮಾಡುವ ಸಂದರ್ಭ ಮುಳ್ಳಿಕಟ್ಟೆ-ಅರಾಟೆ ಗ್ರಾಮಸ್ಥರಿಗೆ ಅಗತ್ಯ ಮೂಲಭೂತ ವ್ಯವಸ್ಥೆ ಕಲ್ಪಿಸಿಲ್ಲ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮೂಲಭೂತ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ ಅವರು, ಮೊವಾಡಿ ಕ್ರಾಸ್‍ನಿಂದ ಮುಳ್ಳಿಕಟ್ಟೆ ಅರಾಟೆವರೆಗೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು, ಮುಳ್ಳಿಕಟ್ಟೆಯಿಂದ ಮೊವಾಡಿ ಕ್ರಾಸ್‍ವರೆಗೆ ಬೀದಿದೀಪ ಅಳವಡಿಸಬೇಕು ಮತ್ತು ಮುಳ್ಳಿಕಟ್ಟೆ ಜಂಕ್ಷನ್‍ನಲ್ಲಿ ಎರಡು ಬದಿಗಳಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು, ಅಂಡರ್‍ಪಾಸ್ ಅಥವಾ ಮೇಲ್ಸೆತುವೆ ಬೇಡಿಕೆ ನಮ್ಮದು ಎಂದವರು ಹೇಳಿದರು.

ಗ್ರಾಮದ ಪ್ರಮುಖರಾದ ಎಂ.ಎಂ. ಸುವರ್ಣ ಮತ್ತು ವಿಶ್ವನಾಥ ಶೆಟ್ಟಿ ಮಾತನಾಡಿದರು.

Click Here

LEAVE A REPLY

Please enter your comment!
Please enter your name here