ಬಿ. ಅಪ್ಪಣ್ಣ ಹೆಗ್ಡೆಯವರ 90ನೇ ಜನ್ಮ ದಿನಾಚರಣೆ ಪ್ರಯುಕ್ತ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಾಲಯ ಉದ್ಘಾಟನೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹಿರಿಯರಾದ ಬಿ. ಅಪ್ಪಣ್ಣ ಹೆಗ್ಡೆಯವರದು ಜಾತಿ, ಮತ, ಊರನ್ನು ಮೀರಿದ ವ್ಯಕ್ತಿತ್ವ. ಅವರ ಜನ್ಮ ದಿನವನ್ನು ಮಾದರಿ ಕಾರ್ಯಕ್ರಮವಾಗಿಸುವ ಮೂಲಕ ಸಂಭ್ರಮಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು ಅದರ ಪೂರ್ವಭಾವಿಯಾಗಿ ಸಾಂಸ್ಕೃತಿಕ ವೈವಿಧ್ಯ, ಶೈಕ್ಷಣಿಕ ಸಾಧಕರಿಗೆ ಸಮ್ಮಾನ, ಕನ್ನಡ ಶಾಲೆಗೆ ರಂಗ ಮಂದಿರ ನಿರ್ಮಾಣದಂತಹ ಕಾರ್‍ಯಕ್ರಮಗಳು ನಡೆಯಲಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಹೇಳಿದರು.
ಅವರು ಬುಧವಾರ ಬಿ. ಅಪ್ಪಣ್ಣ ಹೆಗ್ಡೆಯವರ ೯೦ ನೇ ಜನ್ಮ ದಿನಾಚರಣೆಯ ಸಾರ್ವಜನಿಕ ಸಂಭ್ರಮಾಚರಣೆಯ ‘ಅಪ್ಪಣ್ಣ ಹೆಗ್ಡೆ-೯೦’ ಕಾರ್‍ಯಕ್ರಮದ ಅಂಗವಾಗಿ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ವಿಶಾಲ ಮನೋಧರ್ಮ, ತ್ಯಾಗ, ಸಮಾಜದ ಬಗೆಗಿನ ಪರಿಕಲ್ಪನೆ, ಅಗಾಧ ಜ್ಞಾನ ಭಂಡಾರ, ಇಡೀ ಸಮಾಜ ಒಪ್ಪುವ ವ್ಯಕ್ತಿಯಾಗಿದ್ದಾರೆ. ಇಂತಹ ವಿರಳ ವ್ಯಕ್ತಿ ಹಾಗೂ ದಣಿವರಿಯದ ವ್ಯಕ್ತಿತ್ವವನ್ನು ಊರಿಗೆ ಊರೇ ಸೇರಿ ಸಂಭ್ರಮಿಸುವ ಮಾದರಿ ಕಾರ್‍ಯಕ್ರಮ ಆಗಬೇಕಿದೆ ಎಂದ ಅವರು, ಈಗಿನ ರಾಜಕೀಯವೇ ಒಂದು ರೀತಿಯ ಅಸಡ್ಡೆಯಂತಿದ್ದು, ಆದರೆ ಕುಂದಾಪುರದ ರಾಜಕೀಯ ಮಾತ್ರ ಬಹಳ ಹಿಂದಿನಿಂದಲೂ ಇದಕ್ಕೊಂದು ಅಪವಾದ. ಅನೇಕ ಶ್ರೇಷ್ಠ, ಪ್ರಾಮಾಣಿಕ ನಾಯಕರನ್ನು ಇಲ್ಲಿನ ಜನ ಕಂಡಿದ್ದಾರೆ. ಅಂತವರಲ್ಲಿ ಅಪ್ಪಣ್ಣ ಹೆಗ್ಡೆಯವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದವರು ಹೇಳಿದರು.
ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಊರಿನ ಅಭಿವೃದ್ಧಿ, ದೇಗುಲಗಳ ಜೀರ್ಣೋದ್ಧಾರ, ರಾಜಿ ಪಂಚಾಯತಿಕೆ, ನಾಗಮಂಡಲ ಹೀಗೆ ಎಲ್ಲ ಯಾವ ಕಾರ್‍ಯಕ್ರಮವೂ ಅಪ್ಪಣ್ಣ ಹೆಗ್ಡೆಯವರು ಇಲ್ಲದೇ ಪೂರ್ಣಗೊಳ್ಳುವುದಿಲ್ಲ. ಅವರ ೯೦ನೇ ಜನ್ಮ ದಿನೋತ್ಸವವನ್ನು ಸಾರ್ವಜನಿಕ ಕಾರ್‍ಯಕ್ರಮವಾಗಿಸಿ, ಚಿರಸ್ಥಾಯಿಯಾಗಿಸಬೇಕು ಎಂದವರು ತಿಳಿಸಿದರು.
ಬಿ. ಅಪ್ಪಣ್ಣ ಹೆಗ್ಡೆ ಪುತ್ರರಾದ ರಾಮ್‌ರತನ್ ಹೆಗ್ಡೆ, ರಾಮ್ ಕಿಶನ್ ಹೆಗ್ಡೆ, ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್‍ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿಯ ವಸಂತ್ ಗಿಳಿಯಾರು ಸ್ವಾಗತಿಸಿ, ಶ್ರೀಕಾಂತ್ ಹೆಮ್ಮಾಡಿ ವಂದಿಸಿದರು. ಗುರುಕುಲ ವಿದ್ಯಾಸಂಸ್ಥೆಯ ವಿಶಾಲ ಕಾರ್‍ಯಕ್ರಮ ನಿರೂಪಿಸಿದರು.