ಪಡುಕೋಣೆ : ತಲ್ವಾರ್ ಪಿಸ್ತೂಲ್ ಗ್ಯಾಂಗಿನ 11 ಜನರ ಬಂಧನ

0
399

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ‌ ಪೂಜಾರಿ ಮತ್ತವರ ಸ್ನೇಹಿತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರು ಸಂಘರ್ಷಕ್ಕೊಳಗಾದ ಬಾಲಕರು ಸಹಿತ 13 ಜನ ಆರೋಪಿಗಳನ್ನು ವಾಹನ‌ ಮತ್ತು ಪಿಸ್ತೂಲ್ ಸಹಿತ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಆಲೂರು ಹೊಯ್ಯಾಣ ನಿವಾಸಿ ಸಚಿನ್ (24), ಆಲೂರು ರಾಮೇಶ್ವರ ನಗರ ನಿವಾಸಿ ಶರತ್ ದೇವಾಡಿಗ (24), ಕೆಂಬೈಲು ನಿವಾಸಿ‌ಗಳಾದ ಕಾರ್ತಿಕ್ (22), ಹಾಗೂ ಕೀರ್ತಿಕ್ (20), ಪಡುಕೋಣೆ‌ ನಿವಾಸಿ ಪ್ರಕಾಶ್ (20), ಪಡುಕೋಣೆಯ ಹನುಮಂತನಗರ ನಿವಾಸಿ ಜಗದೀಶ್ (31), ಪಡುಕೋಣೆ ರಾಮಮಂದಿರ ನಿವಾಸಿ ಗೌತಮ್ (23), ಪಡುಕೋಣೆ ನಿವಾಸಿ‌ ಮಹೇಂದ್ರ ಪೂಜಾರಿ, ಹಡವು ನಿವಾಸಿ‌ ಸಂತೋಷ್ ಮೊಗವೀರ, ರೋಶನ್‌ ಫೆರ್ನಾಂಡೀಸ್, ಆಲೂರು ನಿವಾಸಿ ಪ್ರಸಾದ್ ಆಚಾರ್ಯ (30) ಹಾಗೂ ಇಬ್ಬರು ಸಂಘರ್ಷಕ್ಕೊಳಗಾದ ಬಾಲಕರು ಎಂದು ಗುರುತಿಸಲಾಗಿದೆ.

ಶ್ರೀಕಾಂತ್ ಹಾಗೂ ಆರೋಪಿ ವಿಶ್ವನಾಥ ಪಡುಕೋಣೆ ಹಾಗೂ ಇತರರ ಮಧ್ಯೆ ಹಳೆಯ ದ್ವೇಷ ಇದ್ದು, ಅದೇ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Click Here

Click Here

ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್, ಅಪರಾಧ ವಿಭಾಗದ ಪಿಎಸ್ಐ ಬಸವರಾಜ್ ಕನಶೆಟ್ಟಿ, ಸಿಬ್ಬಂದಿಗಳಾದ ನಾಗರಾಜ, ಕೇಶವ, ಸಂದೀಪ, ರಾಘವೇಂದ್ರ, ರಾಷ್ಟ್ರಪತಿ, ಚಾಲಕ ಸುಧೀರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಏನಿದು ಪ್ರಕರಣ:
ಕಳೆದ ಐದು ದಿನಗಳ‌ ಹಿಂದೆ ಪಡುಕೋಣೆ ನಿವಾಸಿ ಶ್ರೀಕಾಂತ ಪೂಜಾರಿ ಹಡವು ಗ್ರಾಮದ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಸಂಜೆ ಸ್ನೇಹಿತರಾದ ಅರವಿಂದ ಪೂಜಾರಿ, ಚಂದ್ರ ಪಡುಮನೆ, ಸುರೇಶ, ಶಿವ ಕುಮಾರ್ ಹೆಬ್ಬಾರ್ ಮತ್ತವರ ಮಗ ಮನು ಹೆಬ್ಬಾರ್, ಸುದೇಶ್ ಶೆಟ್ಟಿ ಜೊತೆಯಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದ ವೇಳೆ ಆರೋಪಿಗಳು ಏಕಾಏಕಿ ಮಾರಕಾಯುಧಗಳಿಂದ ಬಂದು ಹಲ್ಲೆಗೆ ಯತ್ನಿಸಿದ್ದಾರೆ‌‌.

ಆರೋಪಿ ಸಚಿನ್ ಪೂಜಾರಿ, ಶರತ್ ಸೇರಿದಂತೆ ಆರೋಪಿಗಳ ತಂಡ ಪಿಸ್ತೂಲ್, ಕಬ್ಬಿಣದ ಪೈಪ್ ಗೆ ತುದಿಯಲಿ ಹಲ್ಲುಗಳುಳ್ಳ ಚಕ್ರ ಇರುವ ಆಯುಧ, ಕಬ್ಬಿಣದ ರಾಡ್, ಮರದ ಸೊಂಟೆ ಇತ್ಯಾದಿ ಮಾರಕಾಯುಧಗಳನ್ನು ಹಿಡಿದು ಮಾರಕಾಯುಧಗಳನ್ನು ಬೀಸುತ್ತಾ ಬೆದರಿಸಿದ್ದಾರೆ. ಶ್ರೀಕಾಂತ ಹಾಗೂ ಸ್ನೇಹಿತರು ಅಲ್ಲೆ ಸ್ವಲ್ಪ ದೂರ ಹೋಗಿ ನಿಂತಿದ್ದು, ಶಿವಕುಮಾರ್ ಹೆಬ್ಬಾರ್ ಹಾಗೂ ಅವರ ಮಗ ಮನು ರವರು ಆರೋಪಿತರನ್ನು ಎದುರಿಸಲು ಹೋದಾಗ ಅವರಿಗೆ ಆರೋಪಿ ವಿಶ್ವನಾಥ ಪಡುಕೋಣೆ, ರೋಶನ್ ಫೆರ್ನಾಂಡಿಸ್, ಪ್ರವೀಣ ಪಡುಕೋಣೆ ತಮ್ಮಲ್ಲಿದ್ದ ಮಾರಕಾಯುಧಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಪರಿಣಾಮ ಶಿವಕುಮಾರ್ ಹೆಬ್ಬಾರ್ ಅವರ ಕೈ ಕಾಲಿಗೆ ಗಾಯಗಳಾಗಿ, ಮನು ಹೆಬ್ಬಾರ್ ತಲೆಗೆ ಗಾಯಗಳಾಗಿದೆ.

ಅಲ್ಲೇ ಸಮೀಪದಲ್ಲಿ ನಿಂತಿದ್ದ ಸುದೇಶ್ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಅವರಿಗೂ ಆರೋಪಿ ಸಚಿನ್ ಪೂಜಾರಿ ನೀವು ಗಲಾಟೆ ಮಾಡಲು ಬಂದವರಾ? ಇದು ಲೈಸನ್ಸ್ ಇಲ್ಲದೇ ಇರುವ ಪಿಸ್ತೂಲ್. ನಿಮ್ಮನ್ನು ಕೊಂದು, ಪಿಸ್ತೂಲ್ ಬಿಸಾಕಿ ಹೋಗುತ್ತೇನೆ. ಯಾರಿಂದಲೂ ಏನೂ ಮಾಡಲು ಆಗೋದಿಲ್ಲ. ಗಲಾಟೆ ಮಾಡುವುದಿದ್ದರೇ ನಿಮಗೆ ಈಗಲೇ ಶೂಟ್ ಮಾಡಿ ಸಾಯಿಸುವುದಾಗಿ ಪಿಸ್ತೂಲ್ ತಲೆಗೆ ಹಿಡಿದು ಜೀವ ಬೆದರಿಕೆ ಹಾಕಿದ್ದಲ್ಲದೇ ಕೈಯಿಂದ ಕೆನ್ನೆ, ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ಶ್ರೀಕಾಂತ್ ಪೊಲೀಸರಗೆ ದೂರು ನೀಡಿದ್ದರು.

Click Here

LEAVE A REPLY

Please enter your comment!
Please enter your name here