ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಇಳಿಜಾರಿನಲ್ಲಿ ವೇಗವಾಗಿ ಬಂದ ಬೈಕ್ ಸವಾರ ನೇರವಾಗಿ ಹೆದ್ದಾರಿ ಪಕ್ಕದ ಹೊಳೆಗೆ ಹಾರಿದ ಘಟನೆ ಬೈಂದೂರು ಪೊಲಿಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ಸಮೀಪದ ನಾಕಟ್ಟೆ ಕಿರು ಸೇತುವೆ ಸಮೀಪ ಗುರುವಾರ ಮಧ್ಯಾಹ್ನ ನಡೆದಿದೆ. ಸಿನೆಮಾ ಶೈಲಿಯಲ್ಲಿ ಹೊಳೆಗೆ ಬಿದ್ದು ಪಾರಾದ ಬೈಕ್ ಸವಾರನನ್ನು ಕಿರಿಮಂಜೇಶ್ವರ ನಿವಾಸಿ ಕೆ.ಪಿ.ಇಸ್ಮಾಯಿಲ್ ಎಂಬುವರ ಪುತ್ರ ಉಸ್ಮಾನ್ (24) ಎಂದು ಗುರುತಿಸಲಾಗಿದೆ.
ಭಟ್ಕಳದಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಉಸ್ಮಾನ್ ತನ್ನ ಬೈಕಿನಲ್ಲಿ ಭಟ್ಕಳದಿಂದ ಕಿರಿಮಂಜೇಶ್ವರದ ಮನೆಗೆ ಬರುತ್ತಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಒತ್ತಿನೆಣೆ ಇಳಿಜಾರಿನಲ್ಲಿ ನಾಕಟ್ಟೆ ಸೇತುವೆ ಸಮೀಪ ಬರುತ್ತಿದ್ದಂತೆ ಹೆದ್ದಾರಿಯ ಎಡಕ್ಕೆ ಚಲಿಸಿ ಬೈಕ್ ಸಮೇತ ನೇರವಾಗಿ ಹೊಳೆಗೆ ಹಾರಿ ಬಿದ್ದಿದ್ದಾರೆ. ಹೊಳೆ ಆಳವಾಗಿದ್ದ ಕಾರಣ ಬೈಕ್ ಮುಳುಗಿ ಹೋಗಿದ್ದು, ಸವಾರ ಉಸ್ಮಾನ್ ಈಜಿ ದಡ ಸೇರಿದ್ದಾರೆ.
ಉಸ್ಮಾನ್ ಭಟ್ಕಳದಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಮೀನುಗಾರಿಕೆಗೆ ತೆರಳಿದ್ದ ಉಸ್ಮಾನ್ ನಿದ್ದೆಗೆಟ್ಟಿದ್ದರು ಎನ್ನಲಾಗಿದೆ. ನಾಕಟ್ಟೆ ಸೇತುವೆ ಸಮೀಪಿಸುತ್ತಿದ್ದಂತೆ ಮಂಪರು ಆವರಿಸಿದಂತಾಗಿದೆ ಎನ್ನಲಾಗಿದೆ. ಪರಿಣಾಮ ಬೈಕ್ ಸಮೇತ ಹೊಳೆಗೆ ಬಿದ್ದಿದ್ದಾರೆ. ಅದೃಷ್ಟವಷಾತ್ ಪ್ರಾಣಾಪಾಯದಿಮದ ಪಾರಾಗಿದ್ದು, ಬೈಮದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬೈಕ್ ಹೊಳೆಯಲ್ಲಿ ಮುಳುಗಿ ಹೋಗಿದೆ.