ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಫೆರಿ ರಸ್ತೆಯ ಅಂಜುಮಾನ್ ಶಾಲೆಯ ಅಂಗನವಾಡಿ ಕೇಂದ್ರದ 22 ಮಕ್ಕಳಿಗೆ ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ವತಿಯಿಂದ ಎರಡು ಜೊತೆ ಸಮವಸ್ತ್ರಗಳನ್ನು ನೀಡಲಾಯಿತು.
ಅಂಗನವಾಡಿ ಮೇಲ್ವಿಚಾರಕಿ ಲಲಿತಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆ ಸರಿತಾ ರವರ ಪ್ರಯತ್ನದಿಂದಾಗಿ ಈ ಅಂಗನವಾಡಿಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇದರ ಫಲವಾಗಿ ಈ ಅಂಗನವಾಡಿಯಲ್ಲಿ 22 ಮಕ್ಕಳು ಕಲಿಯುತ್ತಿದ್ದಾರೆ. ಪ್ರಸ್ತುತ ಸರಕಾರಿ ಅಂಗನವಾಡಿಗಳಿಗೆ ಸಂಘ ಸಂಸ್ಥೆ ಮತ್ತು ದಾನಿಗಳಿಂದ ನೆರವಿನ ಸಹಕಾರ ಅತ್ಯಗತ್ಯವಾಗಿದೆ, ಈ ನಿಟ್ಟಿನಲ್ಲಿ ಜಮೀಯತುಲ್ ಫಲಾಹ್ ಸಂಸ್ಥೆಯ ಈ ಸಹಕಾರ ಶ್ಲಾಘನೀಯವಾದದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ರವರು ಸಮವಸ್ತ್ರ ವಿತರಿಸಿ ಮಾತನಾಡಿ
ರಾಜ್ಯದಲ್ಲಿ ವರ್ಷಕ್ಕೆ ಸುಮಾರು 3 ಲಕ್ಷ ಮಕ್ಕಳು ಅಂಗನವಾಡಿಯಿಂದ ಒಂದನೇ ತರಗತಿಗೆ ದಾಖಲಾಗುತ್ತಿದ್ದು ಅದರಲ್ಲಿ ಸರಕಾರಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಕೇವಲ ಐವತ್ತು ಸಾವಿರ ಮಾತ್ರ ಮುಂದಿನ ದಿನಗಳಲ್ಲಿ ಎಲ್ಲಾ ಮಕ್ಕಳು ಸರಕಾರಿ ಶಾಲೆಗೆ ಸೇರುವಂತಾಗಬೇಕು ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜ.ಫ. ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯರಾದ ಮುಜಾವರ್ ಅಬು ಮೊಹಮ್ಮದ್ ರವರು ಮಾತನಾಡಿ ಈಗಾಗಲೇ ದಾನಿಗಳ ಮೂಲಕ ಅಂಗನವಾಡಿಗೆ ಬೇಕಾದ ಸೌಕರ್ಯ ಒದಗಿಸಲು ಪ್ರಯತ್ನಿಸುತ್ತಿದ್ದು ಮುಂದಿನ ದಿನಗಳಲ್ಲಿ ಶಾಲಾ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಜ.ಫ. ಸದಸ್ಯರಾದ ಖತೀಬ್ ಅಶ್ಪಾಕ್ , ಅಬ್ದುಲ್ ರಜಾಕ್ ಬೀಜಾಡಿ, ಆಶಾ ಕಾರ್ಯಕರ್ತೆ ಮಾಲತಿ, ತಾಯಂದಿರ ಸಮಿತಿ ಅಧ್ಯಕ್ಷೆ ಶ್ರೀಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರ ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸರಿತಾ ಸರ್ವರನ್ನು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.