ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಎಚ್.ಹರಿಪ್ರಸಾದ ಶೆಟ್ಟಿ
ಕುಂದಾಪುರ ತಾಲೂಕು ಪಂಚಾಯತ್ ನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಛೇರಿ ಉದ್ಘಾಟನೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಮೇಲೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ರಾಜ್ಯ ಸರಕಾರದ ಐದು ಗ್ಯಾರಂಟಿಗಳಿಂದ ಜನರಿಗೆ ಬಹಳಷ್ಟು ಪ್ರಯೋಜವಾಗಿದೆ. ಇದನ್ನು ಸಹಿಸಿಕೊಳ್ಳಲಾಗದ ವಿರೋಧ ಪಕ್ಷದವರು ಸರಕಾರದ ಗ್ಯಾರಂಟಿಗಳ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವವರೆಗೆ ಸರಕಾರದ ಐದೂ ಗ್ಯಾರಂಟಿಗಳು ನಿರಂತರವಾಗಿ ನಡೆಯುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ ಹೆಗ್ಡೆ ಮೊಳಹಳ್ಳಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯತ್ ಕಛೇರಿಯಲ್ಲಿ ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಛೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಿತಿ ಸದಸ್ಯರು ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಯೋಜನೆಯಿಂದ ವಂಚಿತರಾಗಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರೆಕಿಸಿಕೊಡಲು ಶ್ರಮಿಸುವುದರ ಜೊತೆಗೆ ಜಿಲ್ಲೆಯಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.
ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾತನಾಡಿ, ಜಿಲ್ಲೆಯಲ್ಲಿ ಶಾಸಕರು, ಸಂಸದರು ನಮ್ಮ ಪಕ್ಷದವರಿಲ್ಲ ಎಂಬ ಭಾವನೆಯನ್ನು ಬಿಡಬೇಕು. ಅನೇಕ ಕಠಿಣ ಸವಾಲುಗಳನ್ನು ಎದುರಿಸಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಇತಿಹಾಸ ನಮ್ಮಲ್ಲಿದೆ. ಪಕ್ಷ ನಮಗೆ ನೀಡಿದ ಹುದ್ದೆ ಮತ್ತು ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕಿದೆ. ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಬಾವುಟ ಹಾರಾಡುವಂತೆ ಮಾಡಲು ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಹರಿಪ್ರಸಾದ ಶೆಟ್ಟಿ, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೋ, ಕುಂದಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಸದಾನಂದ ಶೆಟ್ಟಿ ಕೆದೂರು, ಶಂಕರ ಕುಂದರ್, ಸಮಿತಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಸಂತೋಷ ಕುಮಾರ್ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.