ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಅಸಂಘಟಿವಾಗಿರುವ ಮೀನುಗಾರಿಕಾ ವೃತ್ತಿ ನಿರತರನ್ನು ಸಂಘಟನೆಯ ಮೂಲಕ ಸಶಕ್ತವಾಗಿಸಲು ಮತ್ಸ್ಯ ಸಂಪದ ಯೋಜನೆಯ ಈ ರಾಷ್ಟ್ರಿಯ ಮೀನುಗಾರರ ನೋಂದಣಿ ಯೋಜನೆ ಪೂರಕವಾಗುತ್ತದೆ. ಮೀನು ಹಿಡಿಯುವವರನ್ನು ಮಾತ್ರ ಮೀನುಗಾರರು ಎಂದು ಭಾವಿಸುವ ಕಾಲವಿತ್ತು. ಮತ್ಸ್ಯಸಂಪದ ಯೋಜನೆ ಬಂದ ಬಳಿಕ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಎಲ್ಲರನ್ನು ಗುರುತಿಸುವಲ್ಲಿ ಸಹಕಾರಿಯಾಗಿದೆ. ನಮ್ಮ ದೇಶದಲ್ಲಿರುವ ಮೀನುಗಾರರ ಅಂಕಿಅಂಶ ಪಡೆಯಲು ಇದು ಅನುಕೂಲವಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾರತ ಸರಕಾರ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮೀನುಗಾರಿಕೆ ಇಲಾಖೆ, ಮತ್ತು ಕರ್ನಾಟಕ ಸರಕಾರ ಮೀನುಗಾರಿಕೆ ಇಲಾಖೆ ಹಾಗೂ ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿಯಮಿತ., ಬೀಜಾಡಿ ಇವರ ಸಹಭಾಗಿತ್ವದಲ್ಲಿ “ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆಯಡಿ” ಮೀನುಗಾರರ ನೋಂದಾವಣಿ ಶಿಬಿರದ” ಉದ್ಘಾಟನಾ ಸಮಾರಂಭ” ವನ್ನು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಕೇಂದ್ರ ಕಛೇರಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರಕಾರದಿಂದ ಸಿಗುವ ಸೌಲಭ್ಯವನ್ನು ಸಂಘದ ಸದಸ್ಯರಿಗೆ ನೋಂದಣಿ ಮಾಡುವ ಕಾರ್ಯಕ್ರಮವು ಉತ್ತಮ ಕಾರ್ಯಕ್ರಮವಾಗಿದ್ದು, ಬೀಜಾಡಿ
ಮೀನುಗಾರರ ಸಹಕಾರಿ ಸಂಘವು ಇಂತಹ ಅನೇಕ ಯೋಜನೆಗಳನ್ನು ಸದಸ್ಯರಿಗೆ ಮುಟ್ಟಿಸುವಲ್ಲಿ ಸದಾ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಭೆಯಲ್ಲಿ ಸಾಂಕೇತಿಕವಾಗಿ ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ ಯೋಜನೆಯ ನೋಂದಣಿ ಪ್ರಮಾಣ ಪತ್ರವನ್ನು ವಿತರಿಸಿದರು.
ಸಂಘದ ಅಧ್ಯಕ್ಷರಾದ ಬಿ. ಮಂಜುನಾಥ ಕುಂದರ್ ಚಾತ್ರಬೆಟ್ಟು, ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿ, ನೈಜ ಮೀನುಗಾರರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡುವ ಕೇಂದ್ರ ಸರ್ಕಾರದ ಕ್ರಮ ಶ್ಲಾಘನಾರ್ಹವಾಗಿದೆ. ಇದರಿಂದ ಮೀನುಗಾರಿಕಾ ವೃತ್ತಿನಿರತರಿಗೆ ಮೀನುಗಾರರೆಂದು ಖಚಿತಪಡಿಸಲು ಸಾಧ್ಯವಾಗುತ್ತದೆ. ಬೀಜಾಡಿ ಮೀನುಗಾರರ ಸಹಕಾರಿ ಸಂಘವು ಮಾರಿಬಲೆ ಮೀನುಗಾರರಿಂದ ಸ್ಥಾಪನೆಗೊಂಡು ಈ ಮಟ್ಟಕ್ಕೆ ಬೆಳೆದಿದೆ. ಮೂರು ಶಾಖೆಗಳು, ಕೇಂದ್ರ ಕಛೇರಿಯನ್ನು ಹೊಂದಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಅತ್ಯುತ್ತಮ ಮೀನುಗಾರರ ಸಂಘ ಪ್ರಶಸ್ತಿ, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ಸಹಕಾರ ಸಪ್ತಾಹ ಸಂದರ್ಭದಲ್ಲಿ ಪ್ರಶಸ್ತಿ ಲಭಿಸಿದೆ ಎಂದರು. ವೃತ್ತಿಯಲ್ಲಿ ನಿರತರಾದವರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಪ್ರಕಾಶ್.ಜಿ.ಪೂಜಾರಿ, ಉಡುಪಿ ಮೀನುಗಾರಿಕಾ ಉಪನಿರ್ದೆಶಕಿ ಅಂಜನಾದೇವಿ, ಕಾಮನ್ ಸರ್ವಿಸ್ ಸೆಂಟರ್ ಉಡುಪಿ ಇದರ ಜಿಲ್ಲಾ ವ್ಯವಸ್ಥಾಪಕ ಮಹೇಶ್ ಕೊಠಾರಿ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ, ಕೆ.ಎಫ್.ಡಿ.ಸಿ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ಬಿ.ಹೆರಿಯಣ್ಣ ಚಾತ್ರಬೆಟ್ಟು, ಕೋಟೇಶ್ವರ ವ್ಯ.ಸೇ.ಸ.ಸಂಘ ಅಧ್ಯಕ್ಷರಾದ ಅಶೋಕ ಪೂಜಾರಿ ಬೀಜಾಡಿ, ನಿರ್ದೇಶಕರಾದ ಬಿ. ಶಿವರಾಮ ಅಮೀನ್ ಬೀಜಾಡಿ, ಬಿ.ಶೇಖರ ಮೊಗವೀರ ಅಂಕದಕಟ್ಟೆ, ದಿನೇಶ್ ಮೆಂಡನ್ ಗೋಪಾಡಿ, ಅಣ್ಣಯ್ಯ ಪುತ್ರನ್ ಕುಂಭಾಶಿ, ಶ್ರೀಮತಿ ಜಾನಕಿ ಹಳೆ ಆಳಿವೆ, ಅನುಷಾ ಕೊರವಡಿ, ಶ್ರೀನಿವಾಸ ಮರಕಾಲ ಗೋಪಾಡಿ, ಶ್ರೀಮತಿ ಜ್ಯೋತಿ ಡಿ ಮೆಲ್ಲೊ, ಕುಂದಾಪುರ, ನಾಗೇಶ್ ಬೀಜಾಡಿ, ಸಹ ನಿರ್ದೇಶಕರಾದ ವೆಂಕಟೇಶ್ ಕುಮಾರ್ ಉಪಸ್ಥಿತರಿದ್ದು, ಉಪಾಧ್ಯಕ್ಷ ತೋಟದಬೆಟ್ಟು ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್ ವಂದಿಸಿದರು. ಸಂಘದ ಸಹ ನಿರ್ದೇಶಕರಾದ ಸುನೀಲ್ ಜಿ. ನಾಯ್ಕ್ ಕಾರ್ಯಕ್ರಮನಿರೂಪಿಸಿದರು.