ಕುಂದಾಪುರ: ಜನ್ನಾಡಿಯಲ್ಲಿ 2ಕೋಟಿ ವೆಚ್ಚದ 14‌ಮನೆಗಳನ್ನು ಕೊರಗ ಕುಟುಂಬಗಳಿಗೆ ಹಸ್ತಾಂತರ

0
49

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :12ನೇ ಶತಮಾನದಲ್ಲಿಸಮಾಜ ಸುಧಾರಣೆಯಲ್ಲಿ ಬಸವಣ್ಣನವರ ಸಾಧನೆ ನಿಜಕ್ಕೂ ಶ್ಲಾಘನೀಯ ಆದರೆ ಇನ್ನೂ ಕೂಡಾ ವರ್ಣಬೇಧ ಮುಂದುವರೆಯುತ್ತಿರುವುದು ವಿಷಾಧನೀಯ ಎಂದು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ ಹೇಳಿದರು.

ಅವರು ಭಾನುವಾರ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಉಡುಪಿ ಜಿಲ್ಲೆಯ ಜನ್ನಾಡಿ ಮತ್ತು ಮಣಿಗೇರಿ ಕೊರಗರ ಕಾಲೋನಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ 14 ಉಚಿತ ಮನೆಗಳ ಗೃಹ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದಲಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಮಠಗಳು ಮುಂದೆ ಬರಬೇಕು. ಪೇಜಾವರ ಸ್ವಾಮಿಗಳು ಯೋಚಿಸುತ್ತಿರುವ ರೀತಿಯಲ್ಲಿ ಎಲ್ಲಾ ಮಠ ಮಂದಿರಗಳು ಚಿಂತನೆ ನಡೆಸಬೇಕಾಗಿದೆ. ಡಾ. ಹೆಚ್ ಎಸ್ ಶೆಟ್ಟಿ ಮಾಡುತ್ತಿರುವ ಸಾಧನೆ ಉಳಿದವರಿಗೆ ಮಾದರಿ ಎಂದರು.

ಉಡುಪಿ ಪೇಜಾವರ ಶ್ರೀ ಅಧೋಕ್ಷಜ ತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೃಹ ಪೂಜೆ ಮತ್ತು ಲೋಕಾರ್ಪಣೆಗೊಳಿಸಿ ಮಾತನಾಡಿ, ರಾಮ ರಾಜ್ಯದಲ್ಲಿ ರಾಮನಿಗೆ ಮಂದಿರ ಮಾಡಿದರೆ ಸಾಲದು. ಪ್ರಜೆಗಳಿಗೂ ಮಂದಿರ ನಿರ್ಮಾಣಗೊಂಡಾಗ ರಾಮರಾಜ್ಯದ ಕನಸು ನಸಾಗುತ್ತದೆ. ಅಂತಹಾ ಕನಸನ್ನು ಡಾ.ಹೆಚ್.ಎಸ್.ಶೆಟ್ಟಿ ಕಂಡುಕೊಂಡಿದ್ದಾರೆ ಎಂದರು.

Click Here

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರಗ ಸಮಾಜಕ್ಕೆ ಹಕ್ಕುಪತ್ರ ನೀಡುವಲ್ಲಿ ಸರ್ಕಾರ ಮನಮಾಡಬೇಕು ಎಂದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಕ್ಕುಪತ್ರ ಮತ್ತು ಕೀಲಿಕೈ ವಿತರಣೆ ಮಾಡಿ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಡಾ. ಹೆಚ್.ಎಸ್.ಶೆಟ್ಟಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷ ಡಾ.ಹೆಚ್.ಎಸ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನೂರು ಮನೆಗಳನ್ನು ಕೊರಗ ಸಮುದಾಯಕ್ಕೆ ನೀಡುವ ಕನಸು ಹೊಂದಿರುವುದಾಗಿ ತಿಳಿಸಿದರು.

ಇದೆ ಸಂದರ್ಭ ಸಚಿವ ಮುನಿಯಪ್ಪ, ಮನೆ ನಿರ್ಮಿಸಿಕೊಟ್ಟ ಗುತ್ತಿಗೆದಾರ ಉದಯಕುಮಾರ್ ಶೆಟ್ಟಿ ಕೊಯ್ಕಾಡಿರವರನ್ನು ಸನ್ಮಾನಿಸಿ‌ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜೀ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಪರಿಶಿಷ್ಟಜಾತಿ ಮತ್ತು ಬುಡಕಟ್ಟು ಉಪಯೋಜನೆ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಊರ್ಮಿಳ ಬಿ., ಕೊರಗಾಭಿವೃದ್ಧಿ ಸಂಸ್ಥೆಗಳು, ಕರ್ನಾಟಕ ಮತ್ತು ಕೇರಳ ರಾಜ್ಯ ಇದರ ಅಧ್ಯಕ್ಷೆ ಸುಶೀಲ ನಾಡ, ರಾಜಕೀಯ ಮುಖಂಡದಿನೇಶ ಹೆಗ್ಡೆ ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ದೀಪಾ ಶೆಟ್ಟಿ, ಹಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿ ಎಚ್.ಶಂಕರ ಹೆಗ್ಡೆ, ಕೊರಗಾಭಿವೃದ್ಧಿ ಸಂಸ್ಥೆ ಕುಂದಾಪುರ ವಲಯದ ಅಧ್ಯಕ್ಷ ಕುಮಾರ್ ದಾಸ್, ಗುರುನಾಥ್ ದಾನಪ್ಪ ಮೊದಲಾದವರು ಉಪಸ್ಥಿತರಿದ್ದರು.

ಮುರಳಿ ಕಡೆಕಾರ್ ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here