ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೇಶದ ಕಾನೂನಿಗೆ ಸವಾಲೊಡ್ಡುವ ಯಾರನ್ನೆ ಆದರೂ ಸುಮ್ಮನ್ನೆ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಆಡಳಿತ ನಡೆಸುತ್ತಿಲ್ಲ, ಇಂತಹ ಯಾವುದೇ ದೇಶ ವಿರೋಧಿ ಹಾಗೂ ಕಾನೂನು ವಿರೋಧಿ ಕೃತ್ಯವನ್ನು, ಗೋಹತ್ಯೆಯಂತಹ ದುಷ್ಕøತ್ಯವನ್ನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕೋಟೇಶ್ವರದ ಸಹನಾ ಕನ್ವೆಷನ್ ಸೆಂಟರ್‍ನಲ್ಲಿ ಗುರುವಾರ ನಡೆದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಎಷ್ಟೇ ವಿರೋಧವಿದ್ದರೂ ರಾಜ್ಯದ ಬಿಜೆಪಿ ಸರ್ಕಾರ ವಿಧಾನ ಮಂಡಲದಲ್ಲಿ ಅಂಗಿಕಾರವನ್ನು ಪಡೆದು ಗೋಹತ್ಯೆ ನಿಷೇಧಾ ಕಾಯಿದೆಯನ್ನು ಜಾರಿಗೆ ತಂದಿದ್ದರೂ, ಸಮಾಜದ ಕೆಲವು ದುಷ್ಕರ್ಮಿಗಳು ಗೋವುಗಳನ್ನು ಆಕ್ರಮವಾಗಿ ಸಾಗಾಟ ಹಾಗೂ ಹತ್ಯೆ ಮಾಡುವುದನ್ನು ಮುಂದುವರೆಸಿರುವುದು ಖಂಡನೀಯ. ರಾಜ್ಯದಲ್ಲಿ ಗೋಹತ್ಯೆಯನ್ನು ನಿಲ್ಲಿಸುವ ತಾಕತ್ತು ಇದೆ ಎಂದಾದರೆ ಅದು ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಮಾತ್ರ. ಗೋ ಹತ್ಯೆ ನಿಷೇಧದ ಬಗ್ಗೆ ಕಾನೂನು ಅರಿವು ಮೂಡಿಸುವ ಕೆಲಸ ಶೀಘ್ರ ಮಾಡಲಾಗುವುದು ಎಂದರು.
ಅಯಾ ಮೋರ್ಚಾಗಳಿಗೆ ಮುಕ್ತವಾಗಿ ಸಂಘಟನಾ ಮಾಡುವ ಅವಕಾಶವನ್ನು ನೀಡಿ, ಪಕ್ಷಕ್ಕೆ ಕೆಲಸ ತುಂಬುವ ಕೆಲಸ ನಡೆಯುತ್ತಿದೆ. ಮೋರ್ಚಾಗಳ ಮೂಲಕ ಸಮಾಜದ ಎಲ್ಲ ವರ್ಗಗಳ ಜನರ ಸಂಕಷ್ಟಗಳಿಗೂ ಸ್ಪಂದಿಸುವ ಮೂಲಕ ಸಾಮಾಜಿಕ ನ್ಯಾಯ ನೀಡುವ ಕೆಲಸವಾಗಬೇಕು. ಸರ್ಕಾರದ ವಿರುದ್ಧ ನಡೆಯುವ ವ್ಯವಸ್ಥಿತ ಅಪಪ್ರಚಾರಗಳನ್ನು ತಡೆದು, ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ನೀಡಬೇಕು. ಹಿಂದುಳಿದ ವರ್ಗಗಳ ಒಟ್ಟಾಗಿ ಸಮಾಜಕ್ಕೆ ಶಕ್ತಿ ತುಂಬುವ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡುವ ಕಾರ್ಯಕ್ರಮಗಳು ನಿರಂತರವಾಗಿರಬೇಕು ಎಂದರು.
ಸಮಬಾಳು-ಸಮಪಾಲು ಎನ್ನುವ ತತ್ವದ ಮೂಲಕ ಬಿಜೆಪಿ ಸರ್ಕಾರ ಸಮಾಜದ ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಅಪಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ನೋಡಿದ ಬಳಿಕ, ಪೌರತ್ವ ಕಾಯಿದೆ ತಿದ್ದುಪಡಿ ಕಾಯಿದೆ ವಿರೋಧ ಮಾಡಿದವರು ಇದೀಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಎ.ಕಿರಣಕುಮಾರ ಕೊಡ್ಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಷ್ಟ್ರೀಯ ಬಿಜೆಪಿ ಹಿಂದುಗಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮಾಜಿ ಶಾಸಕ ಪದ್ಮನಾಭ ಕೊಠಾರಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಮುಖರಾದ ಸುರೇಶ್ ಬಾಬು, ಅಶೋಕಮೂರ್ತಿ, ವಿಠ್ಠಲ್ ಪೂಜಾರಿ, ಎಂ.ಸಿ.ನಾರಾಯಣ, ರವಿ ನಾಯಕ್, ರಾಜೇಂದ್ರ ನಾಯಕ್. ರಾಜೇಶ್ ಕಾವೇರಿ ಕುಂದಾಪುರ ಉಪಸ್ಥಿತರಿದ್ದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು ಸ್ವಾಗತಿಸಿದರು.ಅರುಣ್ ಭಾಣ ವಂದಿಸಿದರು. ಸತೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.