ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕ್ರೀಡೆಯಲ್ಲಿ ಸೋಲು-ಗೆಲುವುಗಳ ನೋಡಬೇಡಿ, ನಿರಂತರ ಅಭ್ಯಾಸ, ಪಾಲ್ಗೊಳ್ಳುವಿಕೆ ತೋರಿಸಿ. ಸತತ ಪ್ರಯತ್ನ ಯಶಸ್ಸಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಮಾನಸಿಕವಾದ ಸ್ಥೈರ್ಯ ಮತ್ತು ಸ್ಪೂರ್ತಿ ನೀಡಬೇಕು. ಸಾಧಕ ವ್ಯಕ್ತಿಗಳನ್ನು ಸ್ಪೂರ್ತಿಯಾಗಿ ಸ್ವೀಕರಿಸಿ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಸುಜ್ಞಾನ್ ಪಿಯು ಕಾಲೇಜು, ವಿದ್ಯಾರಣ್ಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ) ಯಡಾಡಿಮತ್ಯಾಡಿ ಇದರ ವಾರ್ಷಿಕ ಕ್ರೀಡಾಕೂಟ 2024 ಉದ್ಘಾಟಿಸಿ ಮಾತನಾಡಿದರು.
ನಮಗೆ ತೆನ್ಸಿಂಗ್ ಸ್ಪೂರ್ತಿಯಾಗಬೇಕು. ಆತನಿಗೆ ತಾಯಿ ನೀಡಿದ ಮಾನಸಿಕವಾದ ಸ್ಥೈರ್ಯ ಎವರೆಸ್ಟ್ ಶಿಖರವನ್ನು ಏರುವಂತೆ ಮಾಡುತ್ತದೆ. ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಲ್ಲ. ಹಂತಹಂತವಾಗಿ ಸಾಧನೆಯ ಮೆಟ್ಟಿಲೇರಬೇಕು ಎಂದು ಹೇಳಿದ ಅವರು ಸುಜ್ಞಾನ ಪಿಯು ಕಾಲೇಜು ಇವತ್ತು ರಮೇಶ ಶೆಟ್ಟಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ೮೦೦ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಗುರುರಾಜ್ ಪೂಜಾರಿ ಮಾತನಾಡಿ, ಕ್ರೀಡಾಕ್ಷೇತ್ರದಲ್ಲಿ ಮಿಂಚಬೇಕಾದರೆ ಸ್ಪಷ್ಟವಾದ ಗುರಿ ಇರಬೇಕು. ಕಠಿಣ ಪರಿಶ್ರಮ ಪಡಬೇಕು, ನಿರಂತರ ಅಭ್ಯಾಸ ಮಾಡಬೇಕು. ಸೋಲುಗಳನ್ನು ಪರಿಗಣಿಸದೆ ನಿರಂತರ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸುತ್ತ ಇದ್ದರೆ ಯಶಸ್ಸು ನಮ್ಮದಾಗುತ್ತದೆ. ಇವತ್ತು ರಾಜ್ಯ, ಕೇಂದ್ರ ಸರ್ಕಾರ ಉದ್ಯೋಗವಕಾಶಗಳಲ್ಲಿ ಕ್ರೀಡಾಕೊಟಕ್ಕೆ ಮೀಸಲಾತಿ ಇದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ದೈಹಿಕ ಶ್ರಮದೊಂದಿಗೆ ಆರ್ಥಿಕ ಬಲವೂ ಬೇಕಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಬಡತನದಲ್ಲಿರುವ ಕ್ರೀಡಾಪಟುಗಳಿಗೆ ಮುಂದುವರಿಯಲು ಬಡತನ ಕಾರಣವಾಗಬಹುದು. ಅವರಿಗೆ ಇಂಥಹ ಶಿಕ್ಷಣ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್‌ನ ಚೇರ್‌ಮನ್ ಡಾ.ರಮೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯುವಜನಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕುಸುಮಕರ ಶೆಟ್ಟಿ ಉಪಸ್ಥಿತರಿದ್ದರು.
ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ, ಸುಜ್ಞಾನ್ ಪಿಯು ಕಾಲೇಜು ಪ್ರಾಂಶುಪಾಲರಾದ ರಂಜನ್ ಶೆಟ್ಟಿ, ವಿದ್ಯಾರಾಣಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಖ್ಯ ಶಿಕ್ಷಕ ಪ್ರದೀಪ್ ಕೆ ಉಪಸ್ಥಿತರಿದ್ದರು.
ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಜಯಲತಾ ಶೆಟ್ಟಿ ವಂದಿಸಿದರು. ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.