ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ವಲಯ ಸಾಕಷ್ಟು ಲೋಪದೋಷಗಳನ್ನು ಹೊಂದಿದ್ದು, ಗ್ರಾಮದ ಭೌತಿಕ ಸರ್ವೇ ನಡೆಸಬೇಕು ಹಾಗೂ ಪರಿಸರ ಸೂಕ್ಷ್ಮ ವಲಯದ ಒಂದು ಕಿ.ಮೀ ವ್ಯಾಪ್ತಿಯ ಸರ್ವೇನಂಬರ್ ಗುರುತಿಸುವ ಕೆಲಸ ಕೂಡಲೇ ಆಗಬೇಕು ಹಾಗೂ ಸರಳೀಕರಣ ಮಾಡಬೇಕು ಎಂದು ವಂಡ್ಸೆ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿತು.
ನ.22ರಂದು ವಂಡ್ಸೆಯ ಮಹಾತ್ಮಾಗಾಂಧಿ ಸಭಾಭವನದಲ್ಲಿ ನಡೆದ ವಂಡ್ಸೆ ಗ್ರಾಮ ಪಂಚಾಯತ್‍ನ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್ ಅವರ ಅಧ್ಯಕ್ಷತೆಯಲ್ಲಿ ನಡೆಯ ಗ್ರಾಮ ಸಭೆಯಲ್ಲಿ ಗ್ರಾ. ಪಂ ಸದಸ್ಯರು ಹಾಗೂ ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿಯವರು ವಿಷಯ ಮಂಡಿಸಿ ಕಸ್ತೂರಿ ರಂಗನ್ ವರದಿ ಪರಿಸರ ಸೂಕ್ಷ್ಮ ಪ್ರದೇಶ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 20% ಅಭಯಾರಣ್ಯಕ್ಕಿಂತ ಕಡಿಮೆ ಇದ್ದರೆ ಒಂದು ಚದರ ಕಿ.ಮೀ ವ್ಯಾಪ್ತಿಯಲ್ಲಿ 100ಕ್ಕಿಂತ ಜಾಸ್ತಿ ಜನಸಂಖ್ಯೆ ಇದ್ದರೆ ಅವು ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡುವುದಿಲ್ಲ. ಭೌತಿಕ ಸರ್ವೇ ಆಗದೇ ಇಲ್ಲಿ ಸಮಸ್ಯೆಯಾಗಿದೆ. ಭೌತಿಕ ಸರ್ವೇ ಆದರೆ ವಂಡ್ಸೆ ಗ್ರಾಮ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಿಂದ ಹೊರಗುಳಿಯಲಿದೆ. ಇದರ ಜೊತೆಯಲ್ಲಿ ಪರಿಸರ ಸೂಕ್ಷ್ಮ ವಲಯ (ಇ.ಎಸ್.ಝೆಡ್) ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ ಅನುಷ್ಠಾನಕ್ಕೆ ಬರುತ್ತಿದೆ. ಅಭಯಾರಣ್ಯ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯಗಳಿಗೆ ಈಗಾಗಲೇ ಪ್ರತ್ಯೇಕ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಬರಲಿಲ್ಲ ಎಂದು ಅಂತಿಮ ಅಧಿಸೂಚನೆ ಹೊರಡಿಸಿ ಅನುಷ್ಟಾನ ಆರಂಭಿಸಲಾಗಿದೆ. ಇದು ಗಂಭೀರವಾದ ವಿಚಾರವಾಗಿದ್ದು ಇದರಲ್ಲಿ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಸರ್ವೇ ನಂಬರ್ ಗುರುತಿಸುವ ಕೆಲಸ ಕೂಡಲೇ ಆಗಬೇಕು. ಇಲ್ಲದಿದ್ದರೆ ಇಡೀ ಗ್ರಾಮದ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಅನವಶ್ಯಕವಾಗಿ ಇಡೀ ಗ್ರಾಮದ ಜನರು ಕುದುರೆಮುಖ ವನ್ಯಜೀವಿ ವಿಭಾಗದಿಂದ ನಿರಪೇಕ್ಷಣಾ ಪತ್ರ ಪಡೆಯಬೇಕಾಗುತ್ತದೆ. ಮುಂದಿನ ಹಂತದಲ್ಲಿ ಪರಿಸರ ಸೂಕ್ಷ್ಮ ವಲಯದ ಸರಳೀಕರಣ ಮಾಡಬೇಕು. ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಗ್ರಾಮಸ್ಥರು ಅರಿವು ಹೊಂದಬೇಕಾದ ಅಗತ್ಯತೆ ಇದೆ ಎಂದರು.
ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ತುಳಸಿ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ದನ್ ಜೋಗಿ, ಸದಸ್ಯರಾದ ಪ್ರಶಾಂತ ಪೂಜಾರಿ ವಂಡ್ಸೆ, ಶಶಿಕಲಾ ಎಸ್ ವಂಡ್ಸೆ, ಸುಬ್ಬು, ಸುಶೀಲ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವಂಡ್ಸೆ ಗ್ರಾಮದ ಆತ್ರಾಡಿ ಭಾಗದಲ್ಲಿ ದಾರಿದೀಪಗಳ ಅಳವಡಿಕೆ ಹಾಗೂ ದುರಸ್ತಿ, ರಸ್ತೆ ದುರಸ್ತಿ ತುರ್ತು ಕಾಮಗಾರಿ ಆರಂಭಿಸುವಂತೆ ದೀಪಕ್ ಕುಮಾರ್ ಶೆಟ್ಟಿ ಸಭೆಯ ಗಮನ ಸಳೆದರು. ಮೆಸ್ಕಾಂ ಲೈನ್ ಮ್ಯಾನ್ ಒಬ್ಬರು ಸಾರ್ವಜನಿಕರೊಂದಿಗೆ ಅಗೌರಯುತವಾಗಿ ವರ್ತಿಸುತ್ತಿದ್ದಾರೆ ಅವರನ್ನು ವರ್ಗಾವಣೆ ಮಾಡಬೇಕು ಎನ್ನುವಂತೆ ದೀಪಕ್ ಕುಮಾರ್ ಶೆಟ್ಟಿ ಒತ್ತಾಯಿಸಿದರು. ವಂಡ್ಸೆಯಲ್ಲಿ ನೀರಿನ ತೋಡು ಒತ್ತುವರಿಯಾಗಿದ್ದು ತೆರವು ಮಾಡುವಂತೆ ಆಗ್ರಹಿಸಿದರು.
ಸಭೆಯಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರಕ್ಷಕ ಇಲಾಖೆ, ಮೆಸ್ಕಾಂ, ಕಂದಾಯ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಅನುಪಾಲನಾ ವರದಿ, ಆಡಿಟ್ ವರದಿ ಮಂಡಿಸಿದರು. ಪಂಚಾಯತ್ ಸಿಬ್ಬಂದಿ ಸೌಮ್ಯ ಜಮಾಖರ್ಚು ವರದಿ ಮಂಡಿಸಿದರು. ಪಂಚಾಯತ್ ಕಾರ್ಯದರ್ಶಿ ಸುರೇಶ್ ಎಸ್ ಸಭೆ ನಿರ್ಣಯ ಮಂಡಿಸಿ, ವಂದಿಸಿದರು.