ಕುಂದಾಪುರ ಮಿರರ್ ಸುದ್ದಿ…
ಕೊಲ್ಲೂರು :ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕೊಲ್ಲೂರು ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕಾಲೇಜು ಬಾಲಕ – ಬಾಲಕಿಯರ ರಾಜ್ಯ ಮಟ್ಟದ ಹೊನಲು ಬೆಳಕಿನ ನೆಟ್ ಬಾಲ್ ಪಂದ್ಯಾಟ ಉದ್ಘಾಟನಾ ಸಮಾರಂಭ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಕೊಲ್ಲೂರಿನ ಲಲಿತಾಂಬಿಕಾ ಅತಿಥಿ ಗೃಹದಿಂದ ಪುರ ಮೆರವಣಿಗೆ ನಡೆಯಿತು. ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಹೆಗ್ಡೆ ಅವರು ಪುರ ಮೆರವಣಿಗೆ ಚಾಲನೆ ನೀಡಿ, ಕ್ರೀಡಾಕೂಟದ ಧ್ವಜಾರೋಹಣ ಗೈದರು.
ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬಿ. ಕರುಣಾಕರ ಶೆಟ್ಟಿ ರಾಜ್ಯಮಟ್ಟದ ಹೊನಲು ಬೆಳಕಿನ ಕಾಲೇಜು ವಿದ್ಯಾರ್ಥಿಗಳ ನೆಟ್ ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ, ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ ಆಗುತ್ತದೆ. ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ. ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಎಂದು ಹೇಳಿದರು.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವ ಕ್ರೀಡಾ ಪಟುಗಳಲ್ಲಿ ದೈಹಿಕ ಹಾಗು ಮಾನಸಿಕ ಆರೋಗ್ಯ ಅತ್ಯಂತ ಉತ್ಕೃಷ್ಟವಾಗಿರುತ್ತದೆ . ಯಾರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರುತ್ತಾರೋ ತಮ್ಮ ಜೀವನದ ಎಲ್ಲಾ ಕಾರ್ಯಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಾರೆ . ಹಾಗೂ ಕ್ರೀಡೆಗಳಿಂದ ಪರಸ್ಪರ ಪ್ರೀತಿ ಪ್ರೇಮ ಹಾಗೂ ಸೌಹಾರ್ದತೆಯಿಂದ ಬಾಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪ್ರಾಕ್ತನ ವಿದ್ಯಾರ್ಥಿ, ಕಾಮನ್ ವೆಲ್ತ್ ಪದಕ ವಿಜೇತ ಗುರುರಾಜ್ ಪೂಜಾರಿ ಜೆಡ್ಡು, ನೆಟ್ ಬಾಲ್ ಏಕಲವ್ಯ ಪ್ರಶಸ್ತಿ ಪುರಸ್ಕೃತ ನಿತಿನ್ ಕುಮಾರ್ ಸನ್ಮಾನಿಸಿ, ಗೌರವಿಸಲಾಯಿತು.
ಕೊಲ್ಲೂರು ದೇವಳದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಶಾಲಾ ಶಿಕ್ಷಣ (ಪದವಿ ಪೂರ್ವ) ಉಪನಿರ್ದೇಶಕ ಮಾರುತಿ, ಕೊಲ್ಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಭಟ್, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ, ಸುಧಾ ಕೆ ಪಡುವರಿ, ಕೊಲ್ಲೂರು ಗ್ರಾ.ಪಂ ಉಪಾಧ್ಯಕ್ಷ ನಾಗೇಶ್ ದಳಿ, ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ನಾಗರಾಜ್ ಭಟ್, ದೈಹಿಕ ಶಿಕ್ಷಣ ಶಿಕ್ಷಕರ ರಾಜ್ಯ ಸಂಚಾಲಕ ರಾಜಾರಾಮ ಶೆಟ್ಟಿ, ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕ್ರೀಡಾ ಉಪಾಧ್ಯಕ್ಷ ಜೀವನ ಕುಮಾರ್ ಶೆಟ್ಟಿ, ಐವನ್ ಡಿಸೋಜಾ, ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್ ಎ, ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಕ್ರೀಡೆ ಸಹಾಯಕ ನಿರ್ದೇಶಕ ಗುಬ್ಬಿಗೂಡು ರಮೇಶ್, ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷ ದಿನೇಶ್ ಎಂ. ಕೊಡವೂರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊಲ್ಲೂರು ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ.ಬಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ವಂದಿಸಿದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹುಂಚನಿ ಸಚಿನ್ ಕುಮಾರ್ ಶೆಟ್ಟಿ ಸಹಕರಿಸಿದರು.