ಮಕ್ಕಳಿಗೆ ಬದುಕಿನ ಮಹತ್ವ, ಮಾನವೀಯತೆಯ ಅರಿವು, ಜೀವನದ ಪರೀಕ್ಷೆಯಲ್ಲಿ ಪಾಸಾಗುವ ಶಿಕ್ಷಣ ಬೇಕಾಗಿದೆ – ಸೈಯದ್ ಮೊಹಮ್ಮದ್ ಬ್ಯಾರಿ
ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ನ ಸಂಸ್ಥಾಪಕರ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವ ” ಬ್ಯಾರೀಸ್ ಉತ್ಸವ – 2024″
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶಿಕ್ಷಣ ನಮ್ಮ ದೇಶದಲ್ಲಿ ದೇವರು ಕೊಟ್ಟ ಅತ್ಯಂತ ದೊಡ್ಡ ವರ. ಅರ್ಥಾತ್ ಶಿಕ್ಷಣ ದೇವರ ಮತ್ತೊಂದು ಹೆಸರು ಎಂದರೆ ತಪ್ಪಾಗಲಾರದು. ಶಿಕ್ಷಣದ ಮೂಲಕ ಸಹಸ್ರಾರು ಮಕ್ಕಳನ್ನು ಸಮಾಜದ ಆಸ್ತಿಯಾಗಿ, ರಾಷ್ಟ್ರದ ಶಕ್ತಿಯಾಗಿ ರೂಪಿಸುತ್ತಿರುವ ಬ್ಯಾರಿಸ್ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ನೀಡಿರುವ ಕೊಡುಗೆ ಬಹಳ ದೊಡ್ಡದು ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ| ಪಿ.ಎಲ್. ಧರ್ಮ ಹೇಳಿದರು.
ಅವರು ಶನಿವಾರ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ೧೧೯ ನೇ ವರ್ಷದ ಸಂಸ್ಥಾಪಕರ ದಿನ, ಬ್ಯಾರೀಸ್ ಉತ್ಸವ, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆಯ ಐಜಿಬಿಸಿ ಪ್ಲಾಟಿನಂ ಗ್ರೀನ್ ಸರ್ಟಿಫಿಕೇಟ್ ಸಂ‘ಮ ಆಚರಣೆ ಕಾರ್‍ಯಕ್ರಮದಲ್ಲಿ ಲೋಗೋ ಅನಾವರಣಗೊಳಿಸಿ, ಮಾತನಾಡಿದರು.
ಐಜಿಬಿಸಿ ಬೆಂಗಳೂರು ವಿಭಾಗ ಚೇರ್‌ಮೆನ್ ಡಾ| ಚಂದ್ರಶೇಖರ್ ಹರಿಹರನ್ ಅವರು ಪ್ಲಾಟಿನಮ್ ಪ್ರಶಸ್ತಿ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ಗೆ ಹಸ್ತಾಂತರಿಸಿದರು.
ಇಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ, ಉತ್ತಮ ಶಿಕ್ಷಣ ನೀಡುವಲ್ಲಿ ನಮ್ಮದೇನಿಲ್ಲ ಎಲ್ಲವೂ ದೇವರ ದಯೆ. ಜೀವನದ ಉದ್ದೇಶವೇ ಇನ್ನೊಬ್ಬರಿಗೆ ಉಪಕಾರ ಮಾಡುವುದು. ಆ ಕಾರ್‍ಯವನ್ನು ನಾವು ಮಾಡುತ್ತಿದ್ದೇವೆ. ಇಂದಿನ ಮಕ್ಕಳಿಗೆ ಬದುಕಿನ ಮಹತ್ವ, ಮಾನವೀಯತೆಯ ಅರಿವು, ಜೀವನದ ಪರೀಕ್ಷೆಯಲ್ಲಿ ಪಾಸಾಗುವ ಶಿಕ್ಷಣ ಬೇಕಾಗಿದೆ ಎಂದು ಬ್ಯಾರಿಸ್ ಸಂಸ್ಥೆಯ ಸಂಚಾಲಕ ಸೈಯದ್ ಮೊಹಮ್ಮದ್ ಬ್ಯಾರಿ ಹೇಳಿದರು.
ಬ್ಯಾರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ. ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ಡೆನ್ಮಾರ್ಕ್‌ನಲ್ಲಿ ನಡೆದ ವಿಶ್ವ ಅಗ್ನಿಶಾಮಕ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತ ಅಶ್ವಿನ್ ಸನಿಲ್ ಅವರನ್ನು ಸಮ್ಮಾನಿಸಲಾಯಿತು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ, ಸಂಸ್ಥೆಯ ಟ್ರಸ್ಟಿ ಡಾ| ಆಸಿಫ್ ಬ್ಯಾರಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಅಕಾಡೆಮಿಕ್ ಡೀನ್ ಡಾ| ಪೂರ್ಣಿಮಾ, ಬಿಎಡ್ ಪ್ರಾಚಾರ್ಯ ಸಿದ್ದಪ್ಪ ಕೆ.ಎಸ್., ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಯಶೀಲ ಶೆಟ್ಟಿ ಹಾಗೂ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕರಾದ ಡಾ| ಸಂದೀಪ್ ಶೆಟ್ಟಿ, ಪ್ರಿಯಾ ರೇಗೋ ಕಾರ್‍ಯಕ್ರಮ ನಿರೂಪಿಸಿದರು.