ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಾಮಾಜಿಕ, ಧಾರ್ಮಿಕ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಕೊಡುಗೆ ಸಲ್ಲಿಸಿರುವ ಬಸ್ರೂರು ಅಪ್ಪಣ್ಣ ಹೆಗ್ಡೆಯವರದು ಅಪರೂಪದ ವ್ಯಕ್ತಿತ್ವ. ಅವರು ಜಾತಿ, ಧರ್ಮಗಳನ್ನು ಮೀರಿದ ವ್ಯಕ್ತಿ ಎಂದು ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಹೇಳಿದರು.
ಬಸ್ರೂರಿನ ಶಾರದಾ ಕಾಲೇಜು ಆವರಣದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ಲೋಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ್ ಆಳ್ವ ಅವರು, ಅಪ್ಪಣ್ಣ ಹೆಗಡೆ ಅವರು ಸಮಾಜ ಒಪ್ಪುವಂತಹ ಸಜ್ಜನಿಕೆ ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಅವರ ವ್ಯಕ್ತಿತ್ವವನ್ನು ಬಣ್ಣಿಸಲು ಪದಗಳೇ ಸಾಲದು ಎಂದರು.
ಮುಂಬೈಯ ಉದ್ಯಮಿ ಎನ್. ಟಿ.ಪೂಜಾರಿ ಅವರು ‘ಬಸ್ರೂರು ಅಪ್ಪಣ್ಣ ಹೆಗ್ಡೆ 90’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿದರು.
ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ, ಕೋಟ ಗೀತಾನಂದ ಫೌಂಡೇಷನ್ ಟ್ರಸ್ಟ್ ಪ್ರವರ್ತಕ ಆನಂದ ಸಿ. ಕುಂದರ್, ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಬಿ. ಉದಯ್ ಕುಮಾರ ಹೆಗ್ಡೆ, ಬಸೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ಇದ್ದರು.
ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ರಾಜೇಶ್ ಕೆ.ಸಿ. ನಿರೂಪಿಸಿದರು.