ಭಂಡಾರ್‌ಕರ‍್ಸ್ ಕಾಲೇಜಿನ ವತಿಯಿಂದ ಸ್ವಪ್ನ ಶಿಲ್ಪಿ ಡಾ.ಎಚ್.ಶಾಂತಾರಾಮ್ ಅವರಿಗೆ ಭಾವಾಭಿನಂದನಾ ಸಮಾರಂಭ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಶಿಕ್ಷಣ ಸೌಲಭ್ಯ ಇಲ್ಲದ ಕಾಲದಲ್ಲಿ ಕಾಲೇಜನ್ನು ಸ್ಥಾಪನೆ ಮಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯವನ್ನು ಒದಗಿಸಿದ ಮಣಿಪಾಲ ವಿದ್ಯಾಸಂಸ್ಥೆಗಳ ಸಲ್ಲುತ್ತದೆ. ಭಂಡಾರ್‌ಕರ‍್ಸ್ ಕಾಲೇಜಿನ ಬೆಳವಣಿಗೆಗೆ ಡಾ.ಎಚ್.ಶಾಂತಾರಾಮ ಅವರ ಪ್ರಯತ್ನ ಸಾಕಷ್ಟಿದ್ದು, ಅವರ ದೂರದೃಷ್ಟಿತ್ವದ ಕಾರ್ಯಕ್ರಮಗಳು, ಕ್ಲಿಷ್ಟಕರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಬಗೆಹರಿಸುತ್ತಿದ್ದ ಅವರ ಕಾರ್ಯಶೈಲಿ ಎಲ್ಲರಿಗೂ ಮಾದರಿಯಾಗಿದೆ. ಹೀಗಾಗಿ ಭಂಡಾರ್‌ಕರ‍್ಸ್ ಕಾಲೇಜು ಯಾವುದೇ ವಿಶ್ವವಿದ್ಯಾನಿಲಯಗಳಿಗೆ ಕಡಿಮೆ ಇಲ್ಲದಂತೆ ಬೆಳೆದು ನಿಂತಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕುಂದಾಪುರದ ಭಂಡಾರ್‌ಕರ‍್ಸ್ ಕಾಲೇಜಿನ ವತಿಯಿಂದ ಕಾಲೇಜಿನ ಡಾ.ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ಜರಗಿದ ಸ್ವಪ್ನ ಶಿಲ್ಪಿ ಡಾ.ಎಚ್.ಶಾಂತಾರಾಮ್ ಅವರ ಭಾವಾಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸ್ವಪ್ನ ಶಿಲ್ಪಿ ಡಾ.ಎಚ್.ಶಾಂತಾರಾಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಅಭಿನಂದನಾ ನುಡಿಗಳನ್ನಾಡಿದರು. ಮೂಡಬಿದಿರೆ ಮಹಾವೀರ ಕಾಲೇಜಿನ ಅಧ್ಯಕ್ಷ ಅಭಯಚಂದ್ರ ಜೈನ್, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಕಾರ್ಯದರ್ಶಿ ಬಿ.ಪಿ.ವರದರಾಯ ಪೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ.ಗೊಂಡ ಶುಭಾಶಂಸನೆಗೈದರು.
ವಿಜಯಲಕ್ಷ್ಮಿ ಶಾಂತಾರಾಮ್, ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯರಾದ ದೇವದಾಸ ಕಾಮತ್, ಸದಾನಂದ ಚಾತ್ರ, ಪ್ರಕಾಶ್ ಸೋನ್ಸ್, ರಾಜೇಂದ್ರ ತೋಳಾರ್, ಜಯಕರ ಶೆಟ್ಟಿ, ಅಭಿನಂದನ ಎ.ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಡಾ.ರಂಜಿತ್ ಕುಮಾರ್ ಶೆಟ್ಟ, ಪ್ರಜ್ಞೇಶ್ ಪ್ರಭು, ಯು.ಎಸ್.ಶೆಣೈ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಸ್ವಾಗತಿಸಿದರು. ವಿಶ್ವಸ್ಥ ಮಂಡಳಿ ಸದಸ್ಯ ಶಾಂತಾರಾಮ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಪ್ರಾಧ್ಯಾಪಕ ಸತ್ಯನಾರಾಯಣ ವಂದಿಸಿದರು. ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥೆ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.