ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಯಡಾಡಿ ಮತ್ಯಾಡಿ ಗ್ರಾಮದ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆ ಮತ್ತು ಸುಜ್ಞಾನ ಪಿಯು ಕಾಲೇಜಿನ ವಾರ್ಷಿಕೋತ್ಸವ “ವರ್ಷಾ 2024” ಶುಕ್ರವಾರ ಸಂಪನ್ನಗೊಂಡಿತು.
ವರ್ಷಾ 2024ನ್ನು ಉದ್ಗಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ ಮಾತನಾಡಿ, ನಿಸ್ವಾರ್ಥ ಮನೋಭಾವನೆಯಿಂದ ಕಟ್ಟುವ ಯಾವುದೇ ಸಂಸ್ಥೆ ಉತ್ತುಂಗವನ್ನೇರುತ್ತದೆ. ಸುಜ್ಞಾನ ಸಂಸ್ಥೆ ಇಂತಹಾ ಸಾಧನೆಗೆ ಉತ್ತಮ ಊದಾಹರಣೆ ಎಂದರು.
ಸಾಹಿತಿ, ಶಿಕ್ಷಣ ತಜ್ಞ ಗಣನಾಥ ಎಕ್ಕಾರು ಮಾತನಾಡಿ, ಶಿಕ್ಷಣ ವ್ಯಕ್ತಿತ್ವ ವಿಕಸನ ಮಾಡಬೇಕು. ವಿವೇಕಾನಂದರು ಹೇಳುವಂತೆ ಸಮುದ್ರದ ಆಳದಲ್ಲಿ ಮುತ್ತುಗಳಿರುವಂತೆ ಮನುಷ್ಯನ ಮನಸ್ಸಿನ ಆಳದಲ್ಲಿ ಅಪಾರವಾದ ಶಕ್ತಿ ಇದೆ. ಅಂತಹಾ ಶಕ್ತಿಯ ಅರಿವನ್ನು ಶಿಕ್ಷಣದಿಂದ ತಲುಪಲು ಸಾಧ್ಯ ಎಂದರು.
ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಉನ್ನತ ವ್ಯಾಸಂಗಕ್ಕಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಡುವ ಕಷ್ಟವನ್ನು ಅರಿತು, ಆ ನಿಟ್ಟಿನಲ್ಲಿ ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ಪೂರಕ ತರಬೇತಿ ನೀಡುತ್ತಿದೆ ಎಂದರು.
ಸಂಸ್ಥೆಯ ಖಜಾಂಜಿ ಭರತ್ ಶೆಟ್ಟಿ ಮಾತನಾಡಿ ಹೊರ ಜಿಲ್ಲೆಗಳಿಂದ ನಮ್ಮ ಸಂಸ್ಥೆಯ ಮೇಲೆ ನಂಬಿಕೆಯಿಟ್ಟು ಮಕ್ಕಳನ್ನು ಕಳಿಸುತ್ತಿರುವ ಪೋಷಕರು, ಸ್ಥಳೀಯ ವಿದ್ಯಾರ್ಥಿ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾದ್ಯಾಯ ಪ್ರದೀಪ್ ಶೆಟ್ಟಿ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ಪಿ.ಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರು ಸ್ವಾಗತಿಸಿ, ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಂದಿದ್ದ ಸುಮಾರು ನಾಲ್ಕು ಸಾವಿರ ಪೋಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.