ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜಸೇವಕ ವಿಠ್ಠಲ ಶೆಟ್ಟಿಯವರಿಗೆ ನಾಗರಿಕ ಸಮ್ಮಾನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಸಮಾಜ ಸೇವೆ ಅತ್ಯಂತ ಶ್ರೇಷ್ಠವಾದದ್ದು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಭಾನುವಾರ ಕುಂಭಾಸಿಯ ಶ್ರೀ ವಿನಾಯಕ ಸಭಾಗೃಹ ಆನೆಗುಡ್ಡೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಪರಿಸರವಾದಿ ಕೊರ್ಗಿ ವಿಠಲ ಶೆಟ್ಟಿ ಅವರಿಗೆ ಮಾಡಲಾದ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಸಂಪಾದನೆಯ ಒಂದು ಪಾಲನ್ನು ದಾನ ಮಾಡಬೇಕು ಎನ್ನುತ್ತಾರೆ. ಆದರೆ ಸಂಪಾದನೆಯ ಮೂಲ ಪ್ರಾಮಾಣಿಕವಾಗಿದ್ದು ನೀಡುವ ದಾನದ ಮೂಲಕ ಕೊರ್ಗಿ ವಿಠ್ಠಲ ಶೆಟ್ಟಿ ದೊಡ್ಡ ಸ್ಥಾನ ಪಡೆದಿದ್ದಾರೆ ಎಂದರು.
ಕೊರ್ಗಿ ವಿಠಲ ಶೆಟ್ಟಿಯವರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ, ಹಿರಿಯ ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಪ್ರಾಮಾಣಿಕ ಮತ್ತು ಬದ್ಧತೆಯಿಂದ ನಡೆದು ಬಂದ ಕೊರ್ಗಿ ವಿಠಲ ಶೆಟ್ಟಿ ನಮಗೆಲ್ಲ ಮಾದರಿಯಾಗಿದೆ. ಕೊರ್ಗಿ ವಿಠಲ ಶೆಟ್ಟರ ಪರಿಸರ ಪ್ರೇಮ ಮಾದರಿಯಾಗಿದೆ. ಸಮಾಜಸೇವೆಯಲ್ಲಿಯೂ ಕೂಡಾ ಅವರು ಗುರುತಿಸಿಕೊಂಡವರು. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕೊರ್ಗಿ ವಿಠಲ ಶೆಟ್ಟರು ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ, ಕುಂಭಾಶಿ ಮೂಲಕ ನಿರಂತರ ಸೇವೆ ನೀಡುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ 2024ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅವರನ್ನು ಸನ್ಮಾನಿಸುವ ಮೂಲಕ ನಮ್ಮೆಲ್ಲರ ಗೌರವ ಹೆಚ್ಚಾಗಿದೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು.
ಕೊರ್ಗಿ ವಿಠಲ ಶೆಟ್ಟಿ ಅಭಿನಂದನಾ ಸಮಿತಿ ಸದಸ್ಯ ಡಾ.ಅರುಣ್ ಶೆಟ್ಟಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಧನಂಜಯ ಶೆಟ್ಟಿ ಬಿ., ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಕಾರ್ಗಿ ವಿಠ್ಠಲ ಶೆಟ್ಟಿಯವರ ಧರ್ಮಪತ್ನಿ ಭವಾನಿ ವಿ. ಶೆಟ್ಟಿ, ಕುಂದಾಪುರದ ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ, ಕೋರ್ಗಿ ವಿಠ್ಠಲ ಶೆಟ್ಟಿ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ, ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ರಮಣ ಉಪಾಧ್ಯಾಯ , ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಆನೆಗುಡ್ಡೆ ಮೂ.ಬಿ.ಲೋಕೇಶ ಅಡಿಗ, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭವ್ಯವಾದ ಪುರಮೆರವಣಿಗೆಯಲ್ಲಿ ವಿಠಲ ಶೆಟ್ಟಿ ದಂಪತಿಗಳನ್ನು ಸಭಾ ಮಂಟಪಕ್ಕೆ ಕಲಶ ಹಿಡಿದ ಮಹಿಳೆಯರ ಸಮ್ಮುಖದಲ್ಲಿ ಕರೆತರಲಾಯಿತು. ಸಾಂಸ್ಕೃತಿಕ ಕರ‍್ಯಕ್ರಮದ ಅಂಗವಾಗಿ ಅತಿಥಿ ಕಲಾವಿದರಿಂದ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ ಹಾಗೂ ಯಾರು ಗ್ಯಾರಂಟಿ ಇಲ್ಲ ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತ್ತು.
ನಿಮಿತಾ ಶೆಟ್ಟಿ ಪ್ರಾರ್ಥಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಕೆ.ರವಿರಾಜ್ ಉಪಾಧ್ಯಾಯ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ನ ಉಪಾಧ್ಯಕ್ಷ ಜಪ್ತಿ ಬಾಬು ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ನ ಸದಸ್ಯ ಸುಧೀರ್ ಶೆಟ್ಟಿ ಮಲ್ಯಾಡಿ ಸನ್ಮಾನ ಪತ್ರ ವಾಚಿಸಿದರು. ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಕಾರ‍್ಯಕ್ರಮ ನಿರೂಪಿಸಿದರು. ರಾಜಗೋಪಾಲ ಪುರಾಣಿಕ್ ವಂದಿಸಿದರು.ಕೊರ್ಗಿ ವಿಠಲ ಶೆಟ್ಟಿ ಅಭಿನಂದನಾ ಸಮಿತಿ ಅಭಿನಂದನಾ ಸಮಿತಿ ವತಿಯಿಂದ ಬೆಳಿಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸಂಜೆ ಬಡಗುತಿಟ್ಟಿನ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಶ್ರೀಕೃಷ್ಣ ಪಾರಿಜಾತ, ಪ್ರದರ್ಶನಗೊಳ್ಳಲಿದೆ. ಬಳಿಕ ದೇವದಾಸ ಕಾಪಿಕಾಡ್-ವಾಮಂಜೂರು-ಸಾಯಿ ಅಭಿನಯದ ವಿನೂತನ ಶೈಲಿಯ ಹಾಸ್ಯಮಯ ನಾಟಕ ‘ಯಾರೂ ಗ್ಯಾರಂಟಿ ಇಲ್ಲ’ ಪ್ರದರ್ಶನಗೊಂಡಿತು.