ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಕೆಂಪು ಕಲ್ಲು ಗಣಿಗಾರಿಕೆ ಹಾಗೂ ಮರಳುಗಾರಿಕೆ ಶೀಘ್ರ ಆರಂಭಗೊಳ್ಳಲಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.ಈ ಬಗ್ಗೆ ಗಣಿ, ಕನಿಜ ಇಲಾಖೆಯ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಜಯಪ್ರಕಾಶ್ ಹೆಗ್ಡೆ ಹಾಗೂ ತಾವು ಭೇಟಿ ಮಾಡಿ ಮನವಿ ಮಾಡಿದ್ದು ಶುಕ್ರವಾರ ರಾತ್ರಿ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಪ್ರಸ್ತಾಪವಿಸಿ ಎನ್‌ಐಟಿಕೆ ವರದಿಯ ಆಧಾರದಲ್ಲಿ ಅನುಮತಿಸುವುದಕ್ಕೆ ತೀರ್ಮಾನ ಮಾಡಲಾಗಿದೆ. ಇದೀಗ ಮುಖ್ಯಮಂತ್ರಿಗಳ ಅಂಕಿತ ಮಾತ್ರ ಬಾಕಿ ಇದ್ದು, ಸಹಿ ಬಿದ್ದ ತಕ್ಷಣ ಗಣಿಗಾರಿಕೆ ಆರಂಭಗೊಳ್ಳಲಿದೆ ಎಂದರು.
ಕುಂದಾಪುರದ ಐ ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಳ ಒಪ್ಪಂದದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಎಲ್ಲವೂ ಸ್ಥಗಿತಗೊಂಡಿವೆ. ಈ ಸಂಬಂಧ ಎಲ್ಲಾ ತಿದ್ದುಪಡಿಗಳಿಗೆ ಡಿಸಿ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕಾನೂನು ಇಲಾಖೆಯ ಸಚಿವರು, ಹಾಗೂ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕೂಡ ಒಪ್ಪಿಗೆ ನೀಡಿ ಸಹಿ ಹಾಕಿದ್ದಾರೆ. ಮುಖ್ಯಮಂತ್ರಿಗಳ ಸಹಿ ಆದ ಬಳಿಕ ಪುನರಾಂಭಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಗಂಗೊಳ್ಳಿ ಪಂಚಾಯತ್ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸುಮಾರು ಮೂರು ದಶಕಗಳ ಕಾಲ ಗಂಗೊಳ್ಳಿ ಪಂಚಾಯಿತಿಯಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಬೆಂಬಲಿತರ ಸುದೀರ್ಘ ಅವಧಿಯ ಆಳ್ವಿಕೆಯನ್ನು ಕೊನೆಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಒಲಿದಿದ್ದಾರೆ. ಈ ಬಗ್ಗೆ ಅತೀವ ಸಂತೋಷವಿದೆ. ನಮ್ಮ ಮೈತ್ರಿ ಸರ್ಕಾರದ ಬೋರ್ಡ್ ರಚನೆಯಾಗುತ್ತದೆ. ಗಂಗೊಳ್ಳಿಯಲ್ಲಿ ಇರುವ ಎಲ್ಲಾ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತವೆ ಎಂದರು.
ರಾಜ್ಯದ ಪ್ರಮುಖ ಬಂದರು ನಗರಿಗಳಲ್ಲಿ ಒಂದಾಗಿರುವ ಗಂಗೊಳ್ಳಿಯ ಸ್ಥಳೀಯ ಸಮಸ್ಯೆಗಳನ್ನು ಕಡೆಗಣಿಸಿದ್ದರಿಂದ ಹಾಗೂ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ಕಳೆದ ವರ್ಷಗಳಲ್ಲಿ ನಡೆಯದೆ ಇದ್ದುದರಿಂದ ಗಂಗೊಳ್ಳಿ ಪ್ರಬುದ್ಧ ಮತದಾರರು, ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ಕಾಂಗ್ರೆಸ್ ಪರವಾದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡಿ ಗೆಲ್ಲಿದ್ದಾರೆ. ಗಂಗೊಳ್ಳಿ ವಿಚಾರದಲ್ಲಿ ಬಿಜೆಪಿ ತೋರಿದ ನಿಲಕ್ಷ್ಯವನ್ನು ಕಾಂಗ್ರೆಸ್ ಖಂಡಿತ ಮಾಡುವುದಿಲ್ಲ. ಬಂದರು ಸಮಸ್ಯೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಗಂಗೊಳ್ಳಿ ಮಾದರಿಯಲ್ಲೇ ತಾಲೂಕಿನ ಎಲ್ಲಾ ಪಂಚಾಯತ್‌ಗಳಲ್ಲಿಯೂ ತಯಾರುಗುತ್ತೇವೆ. ಯುವಕರಿಗೆ ಹೆಚ್ಚಿನ ಅವಕಾಶ ನೀಡುತ್ತೇನೆ. ಎಲ್ಲಾ ಪಂಚಾಯತ್‌ಗಳಲ್ಲೂ ಕಾಂಗ್ರೆಸ್ ಸದೃಢಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಸ್ತಾಪಿಸಿರುವ ಅವರು, ನಾನು ಪಕ್ಷದಲ್ಲಿ ಸೀನಿಯರ್ ಮೋಸ್ಟ್ ಲೀಡರ್, ನಾಲ್ಕು ಬಾರಿ ಕ್ಷೇತ್ರದಲ್ಲಿ ಎಂಎಲ್‌ಎ ಆಗಿದ್ದೇನೆ. ನಾನು ಯಾರಿಗೂ ಹೆದರುವುದಿಲ್ಲ. ಡಿಕೆಶಿ ಅವರು ಪಾರ್ಟಿ ಅಧಿಕಾರಕ್ಕೆ ಬಂದರೇ, ಕೊಲ್ಲೂರು ವ್ಯವಸ್ಥಾಪನ ಸಮಿತಿಯಲ್ಲಿ ನಿಮ್ಮ ಶಿಫಾರಸ್ಸಿಗೆ ಅವಕಾಶ ಕೊಡ್ತೇನೆ ಎಂದಿದ್ದರು. ಪಕ್ಷ ಅಧಿಕಾರಕ್ಕೆ ಬಂದಿದೆ. ಡಿಕೆಶಿ ಮಾತು ಉಳಿಸಿಕೊಂಡಿದ್ದಾರೆ, ನಾನೂ ಉಳಿಸಿಕೊಂಡಿದ್ದೇನೆ. ಸಮಿತಿ ರಚನೆ ಆಗಿದ್ದು, ಸದ್ಯಕ್ಕೆ ತಡೆಹಿಡಿಯಲಾಗಿದೆ. ಈ ಬಗ್ಗೆಯೂ ಡಿಸಿ ಅವರಿಗೆ ಪತ್ರ ನೀಡಿದ್ದೇವೆ ಎಂದರು.
ಸುಕುಮಾರ ಶೆಟ್ಟಿ ಅವರಿಗೆ ಕೊಲ್ಲೂರು ವ್ಯವಸ್ಥಾಪನಾ ಸಮಿತಿಯಲ್ಲಿ ಸಿಗುತ್ತಿದ್ದ ಅವಕಾಶವನ್ನು ಗೋಪಾಲ ಪೂಜಾರಿ ಅವರೇ ತಪ್ಪಿಸಿದ್ದು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಡಿಕೆಶಿ ಅವರು ಸುಕುಮಾರ ಶೆಟ್ಟಿ ಅವರಲ್ಲಿ ಖುದ್ದಾಗಿ ಕೊಲ್ಲೂರು ದೇವಸ್ಥಾನದ ವಿಚಾರದಲ್ಲಿ ಮಾತನಾಡಿದ್ದಾರೆ. ಕೊಲ್ಲೂರಿಗೋಸ್ಕರ ಕಾ೦ಗ್ರೆಸ್‌ಗೆ ಬರುವುದು ಬೇಡ ಎಂದು ಡಿಕೆಶಿ ಸುಕುಮಾರ ಶೆಟ್ಟಿ ಅವರಿಗೆ ಹೇಳಿದ್ದಾರೆ. ಸುಕುಮಾರ ಶೆಟ್ಟಿ ಅವರೂ ಅದಕ್ಕೆ ಒಪ್ಪಿಯೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಬಳಿಕೆ ಕೆಲವರ ಒತ್ತಡದಿಂದ ಕೊಲ್ಲೂರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರಬಹುದು. ಅವರೂ ಸೀನಿಯರ್ ಕೇಳುವ ಅವಕಾಶವಿದೆ. ತಪ್ಪಲ್ಲ. ಆದರೇ, ಆಗಿಲ್ಲ. ಸರ್ಕಾರದ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.