ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಬೃಹತ್ ಮಟ್ಟದ ವಾಣಿಜ್ಯ ಮಾರಾಟ ಮಳಿಗೆಯ ಮೂಲಕ ರೈತ ಸದಸ್ಯರಿಗೆ ಗೊಬ್ಬರದಿಂದ ಚಿನ್ನದವರೆಗೆ ಎಲ್ಲಾ ಸೌಲಭ್ಯಗಳು, ಸರಕಾರಿ, ಧಾರ್ಮಿಕ ದತ್ತಿ ಹಾಗೂ ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುವ ಹಾಸ್ಟೇಲ್, ದೇವಸ್ಥಾನ, ಶಾಲೆಗಳಿಗೆ ಆಹಾರ ಸಾಮಾಗ್ರಿಗಳ ಪೂರೈಕೆಗಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಉಪ್ಪುಂದದಲ್ಲಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ 13ಕೋಟಿ ವೆಚ್ಚದಲ್ಲಿ ರೈತ ಸಹಕಾರಿ ನವೋದ್ಯಮ ರೈತಸಿರಿ ಅಗ್ರಿಮಾಲ್ ನಿರ್ಮಾಣಗೊಳ್ಳುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಉಪ್ಪುಂದದಲ್ಲಿರುವ ಸಂಘದ ಅಧಿಕೃತ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿದ ಅವರು, ಒಟ್ಟು ರೂ. 20ಕೋಟಿ ವಿನಿಯೋಗದ ಬೃಹತ್ ಪ್ರಮಾಣದ ಒಂದೇ ನಿವೇಶನದಲ್ಲಿ ಬಹುಮಹಡಿ ಕಟ್ಟಡದಲ್ಲಿ ರೈತರಿಗಾಗಿ ಒಂದೇ ಸೂರಿನಡಿ “ರೈತಸಿರಿ ಎಗ್ರಿ ಮಾಲ್” (ಎಂ.ಎಸ್.ಸಿ.) ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು. ಕಟ್ಟಡದಲ್ಲಿ ವಿವಿಧ ಬಗೆಯ ಕೃಷಿ ಸರ್ವಿಸ್ ಸೆಂಟರ್ಗಳು, ಸೂಪರ್ ಮಾರ್ಕೇಟ್ಗಳು, ಬಡಗಿ, ಕಮ್ಮಾರಿಕೆ, ಗ್ಯಾರೇಜ್, ವೆಲ್ಡಿಂಗ್ ಶಾಪ್, ಇಲೆಕ್ಟಿಕಲ್ ಸರ್ವಿಸ್, ಫಾರ್ಮರ್ ಕ್ಲಬ್, ಕೃಷಿಕ ತರಬೇತಿ ಕೇಂದ್ರ, ಕೃಷಿ ಯಂತ್ರೋಪಕರಣಗಳ ಮಳಿಗೆ, ಉಪಹಾರ ಕೇಂದ್ರ, ಅಲ್ಲದೇ ಸಭಾಂಗಣ, ಎಸ್ಕುಲೇಟರ್, ಲಿಫ್ಟ್ ಹಾಗೂ ಸುತ್ತಲೂ ವಿಶಾಲವಾದ ಪಾರ್ಕಿಂಗ್ ಮಾಡಲು ರ್ಯಾಂಪ್ನ ವ್ಯವಸ್ಥೆ ಇದೆ. ಮಳಿಗೆಯು ಒಟ್ಟು 32000/- ಚದರ ಅಡಿ ವಿಸ್ತೀರ್ಣ ಮತ್ತು 8000 ಚದರ ಅಡಿ ಟೆರೇಸ್ ಇದ್ದು 4 ಮಹಡಿಯ ವಿಶೇಷ ವಿನ್ಯಾಸ ಹೊಂದಿದೆ ಎಂದರು.
ಅಲ್ಲದೇ ಕ್ಯಾಂಪ್ಕೋ ಮಾದರಿಯಲ್ಲಿ ಅಡಿಕೆ, ತೆಂಗು, ಭತ್ತ, ನೆಲಗಡಲೆ ಹಾಗೂ ಕಾಡುತ್ಪತ್ತಿ ಇತ್ಯಾದಿ ಬೆಳೆಗಳನ್ನು ಖರೀಧಿಸಿ. ದಾಸ್ತಾನು ಮಾಡಿ, ಉತ್ತಮ ದರ ಹಾಗೂ ಮಾರುಕಟ್ಟೆ ಒದಗಿಸುವುದು, ರೈತ ಸದಸ್ಯರಿಗೆ ಎನ್.ಸಿ.ಎಸ್ ಮಿತಿಯಾಧರಿಸಿ, ಡೆಬಿಟ್ ಕಾರ್ಡ್ ಸೌಲಭ್ಯ , ಯುವಕ-ಯುವತಿಯವರಿಗೆ ಉದ್ಯೋಗ ಸೃಷ್ಟಿಸುವ ಉದ್ಧೇಶ ಹೊಮದಲಾಗಿದೆ ಎಂದ ಅವರು, ಈಗಾಗಲೇ 1.15 ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ಎಂದರು. 2019ರ ಜೂನ್ 14ರಂದು ಸಂಘವು ನಿವೇಶನ ಖರೀದಿಸಿದ್ದು, ಮಂಡಳಿಯ ನಿರ್ದೇಶಕರಿಬ್ಬರಿಂದ ಉಚ್ಚನ್ಯಾಯಾಲಯದ ತಡೆಯಾಜ್ಞೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಅದೇ ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ತೆರವುಗೊಳಿಸಿದ್ದು, ಮುಂದಿನ ಕಾಮಗಾರಿಯನ್ನು ಕೈಗೊಳ್ಳುವಂತೆ ಆಜ್ಞಾನುಸಾರ ಮುಂದಿನ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಕಟ್ಟಡದ ಒಟ್ಟೂ ಅಂದಾಜು ವೆಚ್ಚ 13ಕೋಟಿ ಆಗಲಿದೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿಷ್ಣು ಪೈ ಸ್ವಾಗತಿಸಿದರು.