ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಧಾರ್ಮಿಕ, ಸಾಮಾಜಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆಯವರಿಗೆ ಡಿ.24 ರಂದು 90 ವರ್ಷ ತುಂಬುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬವನ್ನು ಸಾರ್ವಜನಿಕರ ಭಾಗೀದಾರಿಕೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ನಿಟ್ಟಿನಲ್ಲಿ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯ ಬಯಲು ಆವರಣದಲ್ಲಿ ಆ ದಿನ ಸಭಾ ಕಾರ್‍ಯಕ್ರಮ, ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಡಾ| ಮೋಹನ್ ಆಳ್ವ ಹೇಳಿದರು.
ಅವರು ಶುಕ್ರವಾರ ಸಂಜೆ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಿ.24 ರ ಸಂಜೆ 6.30ರ ಸಭಾಕಾರ್‍ಯಕ್ರಮದಲ್ಲಿ ಬಿ. ಅಪ್ಪಣ್ಣ ಹೆಗ್ಡೆಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೆಂದ್ರ ಹೆಗ್ಗಡೆ ಅವರು ಸಾರ್ವಜನಿಕ ಗೌರವ ಸಮರ್ಪಿಸಲಿದ್ದಾರೆ. ವಿಶ್ರಾಂತ ಕುಲಪತಿ ಡಾ| ಬಿ.ಎ.ವಿವೇಕ ರೈ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅವಿಭಜಿತ ಕುಂದಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ ೧೦ ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ, ಅಶಕ್ತರಿಗೆ ನೆರವು ಹಸ್ತಾಂತರ ನಡೆಯಲಿದೆ. ಬಳಿಕ ಉಪ ವೇದಿಕೆಯಲ್ಲಿ ಸಮ್ಮಾನ, ಶುಭಾಶಯ, ಅಭಿನಂದನೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಊಟದ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಅಂದಾಜು 10ಸಾವಿರ ಕ್ಕೂ ಮಿಕ್ಕಿ ಮಂದಿ ಸೇರುವ ನಿರೀಕ್ಷೆಯಿದೆ ಎಂದರು.
ಸಂಜೆ 4 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸದಸ್ಯರಿಂದ ಭಜನಾ ಸಂಕೀರ್ತನೆ, 5 ಕ್ಕೆ ಮಂಗಳೂರಿನ ಜರ್ನಿ ಥೇಟರ್ ತಂಡದಿಂದ ‘ಬೇಲಿ ಮುಳ್ಳಿನ ನೀಲಿ ಹೂಗಳು’ ರಂಗ ಗೀತೆ ಹಾಗೂ ಜಾನಪದ ಗೀತೆಗಳು ಪ್ರಸ್ತುತಿ, ರಾತ್ರಿ 8 ಕ್ಕೆ ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ‘ನೃತ್ಯ ಸಂಗಮ’ ಹಾಗೂ ರಾತ್ರಿ 8.45ಕ್ಕೆ ಬಿಡುವನೆ ಬ್ರಹ್ಮಲಿಂಗ ಖ್ಯಾತಿಯ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಕೊಲ್ಲೂರು ಶ್ರೀ ಮೂಕಾಂಬಿಕೆ ನೃತ್ಯಗಾಥೆ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ,ಗುರುಕುಲ ಪಬ್ಲಿಕ್ ಸ್ಕೂಲ್ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಸಮಿತಿಯ ಉದಯ್ ಪಡುಕರೆ, ವಸಂತ ಗಿಳಿಯಾರು ಉಪಸ್ಥಿತರಿದ್ದರು.