ಓಕ್ ವುಡ್ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಪನ್ನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ಪಡೆಯುವ ಅವಕಾಶಗಳು ಇದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಶನಿವಾರ ಪೋರ್ಟ್ ಗೇಟ್ ಎಜುಕೇಶನ್ ಟ್ರಸ್ಟ್ ನ ಓಕ್ ವುಡ್ ಇಂಡಿಯನ್ ಸ್ಕೂಲ್ ನ ವಾರ್ಷಿಕೋತ್ಸವ 2024ನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸುವುದು ಸುಲಭ. ಆದರೆ ನಡೆಸಿಕೊಂಡು ಹೋಗುವುದು ಸವಾಲಿನದ್ದು ಎಂದ ಅವರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಜೊತೆಯಾಗಿ ಸಾಗಿದಾಗ ಮಾತ್ರ ಒಂದು ಶಿಕ್ಷಣ ಸಂಸ್ಥೆ ಎತ್ತರಕ್ಕೆ ಬೆಳೆಯುವುದು ಸಾಧ್ಯ ಎಂದರು.
ಕಾರ್ಕಳದ ಅಜೆಕಾರ್ ಪದ್ಮಾ ಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ, ನಿಮಗೆ ಸ್ನೇಹಿತರು ಸಿಗಬಹುದು, ಆದರೆ ಬೇರೊಬ್ಬ ತಂದೆ ತಾಯಿ ಸಿಗಲಾರರು. ಹಾಗಾಗಿ ಅಪ್ಪ ಅಮ್ಮನ ಪ್ರೀತಿಯನ್ನು ಉಳಿಸಿಕೊಳ್ಳಿ. ನಿಮ್ಮ ತಂದೆ ತಾಯಿಯ ಮನಸ್ಸಿನಲ್ಲಿ ಪ್ರೀತಿ ಹಚ್ಚಬೇಕು. ವಿದ್ಯೆಯಿಂದ ವಿನಯ ಬರುತ್ತದೆ. ವಿನಯದಿಂದ ಗೌರವ ಲಭಿಸುತ್ತದೆ. ನಿಮ್ಮ ಪೋಷಕರ ಕಣ್ಣಿನಿಂದ ಬರುವ ಕಣ್ಣೀರು ಆನಂದ ಭಾಷ್ಪ ಆಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿರಬೇಕು ಎಂದರು.
ಮಕ್ಕಳ ಜೊತೆ ಕಳೆಯುವ ಸಮಯವನ್ನು ಭಾವನಾತ್ಮಕವಾಗಿ ಕಳೆಯಿರಿ. ನಿಮ್ಮ ಮಕ್ಕಳನ್ನು ಉತ್ತಮ ಪ್ರಜೆಯಾಗಿ ಬೆಳೆಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ. ಕಣ್ಣಿಗೆ ಕಾಣದ ದೇವರನ್ನು ತಂದೆ ತಾಯಿಯಲ್ಲಿ ನೋಡಿ ಎಂದು ಪ್ರಗತಿ ರಿಶಭ್ ಶೆಟ್ಟಿ ಹೇಳಿದರು.
ಫೋರ್ಟ್ ಗೇಟ್ ಶಿಕ್ಷಣ ಟ್ರಸ್ಟ್ ನ ಜಂಟಿ ವ್ಯವಸ್ಥಾಪಕ ಟ್ರಸ್ಟಿ ಅಭಿನಂದನ್ ಎ.ಶೆಟ್ಟಿ ಮಾತನಾಡಿ, ತಪ್ಪು ಸರಿಗಳನ್ನು ವಿಮರ್ಷಿಸುವ ಶಕ್ತಿ ನಿಜವಾದ ಶಿಕ್ಷಣ. ವಿದ್ಯಾರ್ಥಿ ಪೋಷಕರ ಬೆಂಬಲದಿಂದ ನಮ್ಮ ವೋಕ್ ವುಡ್ ಶಾಲೆ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು. ಇದೇ ಸಂದರ್ಭ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಫೋರ್ಟ್ ಗೇಟ್ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಜಂಟಿ ವ್ಯವಸ್ಥಾಪಕ ಟ್ರಸ್ಟಿ ನೀತಾ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.