ಕುಂದಾಪುರ ಮಿರರ್ ಸುದ್ದಿ…

ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಬೀಜಾಡಿಯ ಮನೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆಯೆ ಪತ್ನಿ, ತಾಯಿ, ಸಹೋದರಿಯರ ಹಾಗೂ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತು. ಮನೆ ಮಂದಿಯ ನೋವಿನ ಆಕ್ರಂಧನ ಎಂತವರ ಮನವೂ ಕಕ್ಕುವಂತಿತ್ತು. ಕುಟುಂಬದ ಆಧಾರ ಸ್ತಂಭವಾಗಿದ್ದ ಅನೂಪ್ ಪೂಜಾರಿ ಅಗಲುವಿಕೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿತ್ತು.
ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಮಮತಾದೇವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ, ಸಹಾಯಕ ಕಮೀಷನರ್ ಮಹೇಶ್ಚಂದ್ರ, ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಕುಂದಾಪುರ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಸಹಿತ ವಿವಿಧ ಇಲಾಖೆ ಅಧಿಕಾರಿಗಳು, ಭಾರತೀಯ ಭೂಸೇನೆ ಅಧಿಕಾರಿಗಳು ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿನ ನಮನ ಸಲ್ಲಿಸಲಾಯಿತು. ಬಳಿಕ ಬೀಜಾಡಿ ಪಡುಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೆ.ರಘುಪತಿ ಭಟ್, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ, ರೈಲ್ವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಕುಂದರ್, ಸತ್ಯಜಿತ್ ಸುರತ್ಕಲ್, ಮಾಜಿ ಸೈನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾಗರೋಪಾದಿಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಾತಿ ಮತ ಬೇಧವಿಲ್ಲದೆ ಸಾಗಿ ಬಂದ ಜನರು ಅನೂಪ್ ಪೂಜಾರಿ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಬೀಜಾಡಿಯ ಕಡಲ ತೀರದಲ್ಲಿ ಅನೂಪ್ ಪೂಜಾರಿ ಅವರ ಅಂತಿಮ ಸಂಸ್ಕಾರ ಸರಕಾರದ ಗೌರವದೊಂದಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೀಜಾಡಿಯ ಕಡಲ ಕಿನಾರೆಯ ಸರಕಾರಿ ಸ್ಥಳದಲ್ಲಿ ನಡೆಯಿತು. ಭಾರತೀಯ ಭೂಸೇನೆ ವತಿಯಿಂದ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು.
ಅಮರ್ ರಹೆ ಅಮರ್ ರಹೆ ಅನೂಪ್ ಪೂಜಾರಿ ಅಮರ್ ರಹೆ, ಜೈ ಜವಾನ್ ಕೈ ಕಿಸಾನ್, ಭಾರತ್ ಮಾತಾ ಕಿ ಜೈ ಎಂಬ ಘೋಷ ವಾಕ್ಯ ಮೊಳಗುತ್ತಿತ್ತು. ಹುಟ್ಟೂರು ಬೀಜಾಡಿ ಶೋಕ ಸಾಗರದಲ್ಲಿ ಮುಳುಗಿತ್ತು. ಅಂತಿಮ ದರ್ಶನಕ್ಕೆ ಬಂದವರು ದುಖತಪ್ತರಾಗಿ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಪಾರ್ಥಿವ ಶರೀರ ಸಾಗಿ ಬಂದ ದಾರಿಯುದ್ದಕ್ಕೂ ರಸ್ತೆಯಲ್ಲಿ ಜನರು ರಂಗೋಲಿ ಹಾಕಿ ಅನೂಪ್ ಪೂಜಾರಿ ಅವರಿಗೆ ಅಂತಿಮ ನಮನ ಸಲ್ಲಿಸಿದರೆ, ಅನೇಕ ಕಡೆಗಳಲ್ಲಿ ಅನೂಪ್ ಪೂಜಾರಿ ಅವರ ಬ್ಯಾನರ್, ಕಟೌಟ್‍ಗಳನ್ನು ಹಾಕಿ ಜನರು ಶ್ರದ್ಧಾಂಜಲಿ ಅರ್ಪಿಸಿದರು.
ಪಾರ್ಥಿವ ಶರೀರ ಸಾಗಿ ಬಂದ ವಿವಿಧೆಡೆಗಳಲ್ಲಿ ಸಾರ್ವಜನಿರು ಅನೂಪ್ ಪೂಜಾರಿ ಅವರ ಅಂತಿಮ ದರ್ಶನ ಪಡೆದರು. ಹಲವರು ಆರತಿ ಬೆಳಗಿ ಮತ್ತೆ ಹುಟ್ಟಿ ಬಾ ಎಂಬ ಜೈಘೋಷ ಹಾಕಿದರು. ಬೈಕ್, ಕಾರು, ಮತ್ತಿತರ ನೂರಾರು ವಾಹನಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾರ್ಥಿವ ಶರೀರ ಹೊತ್ತ ವಾಹನದೊಂದಿಗೆ ಜನರು ಸಾಗಿ ಬಂದು ಗೌರವ ಸಲ್ಲಿಸಿದ ದೃಶ್ಯ ಅದ್ಭುತವಾಗಿತ್ತು. ಅನೂಪ್ ಪೂಜಾರಿ ಗೌರವಾರ್ಥ ಬೀಜಾಡಿ ಪರಿಸರದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು.
ಮೃತ ಅನೂಪ್ ಪೂಜಾರಿ ಸ್ಮರಣಾರ್ಥ ಬೀಜಾಡಿ ಕಡಲ ತೀರದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಬೀಜಾಡಿ ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಬೀಜಾಡಿ ನಿವಾಸಿ ಚಂದು ಪೂಜಾರ್ತಿ ಮತ್ತು ನಾರಾಯಣ ಪೂಜಾರಿ ದಂಪತಿಯ ಏಕೈಕ ಪುತ್ರನಾಗಿದ್ದ ಅನೂಪ್‍ಗೆ ಬಾಲ್ಯದಿಂದಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಹಂಬಲವಿತ್ತು. ಬೀಜಾಡಿ ಪಡು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತೀಯ ಸೇನೆಗೆ ಸೇರಿದ ಅನಂತರ 13 ವರ್ಷಗಳ ಕಾಲ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದು, ಮುಂದಿನ ನಾಲ್ಕು ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಊರಿಗೆ ಬಂದು ನೆಲೆಸುವ ಯೋಚನೆ ಹೊಂದಿದ್ದರು.
ಪೆರ್ಡೂರು ಮುಳ್ಳುಗುಡ್ಡೆಯ ಮಂಜುಶ್ರೀಯನ್ನು ವಿವಾಹವಾಗಿದ್ದ ಅನೂಪ್ ಅವರಿಗೆ ಎರಡು ವರ್ಷದ ಇಶಾನಿ ಹೆಸರಿನ ಹೆಣ್ಣು ಮಗುವಿದೆ. ದೇಶಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬ ಸಿದ್ಧಾಂತವನ್ನು ಹೊಂದಿದ್ದ ಅನೂಪ್ ಅವರು ಡಿಸೆಂಬರ್‍ನಲ್ಲಿ ರಜೆ ಪಡೆದು ಊರಿಗೆ ಬಂದಿದ್ದರು. ಕೋಟೇಶ್ವರದ ಕೊಡಿಹಬ್ಬದಲ್ಲಿ ಪಾಲ್ಗೊಂಡು ಮಿತ್ರರೊಂದಿಗೆ ಸಮಯ ಕಳೆದಿದ್ದರು. ಸ್ನೇಹಮಯಿಯಾಗಿದ್ದ ಅವರು ಬೀಜಾಡಿ, ಕೋಟೇಶ್ವರ ಪರಿಸರದ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಕೊಡಿಹಬ್ಬಕ್ಕೆ ಬಂದವರು ಅದೇ ಸಂದರ್ಭ ಮಗಳ ಹುಟ್ಟು ಹಬ್ಬವನ್ನು ಕೂಡ ಆಚರಿಸಿದ್ದರು. ಡಿ.21ರಂದು ಮರಳಿ ಕರ್ತವ್ಯಕ್ಕೆ ತೆರಳಿದ್ದರು. ಸೇವೆಗೆ ವಾಪಾಸಾದ ಮೂರೇ ದಿನದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಐದು ಜನ ಯೋಧರನ್ನು ನಾವು ಕಳೆದುಕೊಂಡಿದ್ದೇವೆ. ಹುತಾತ್ಮರಾದ ಕುಂದಾಪುರದ ಅನೂಪ್ ಪೂಜಾರಿ ಅವರಿಗೆ ಜಿಲ್ಲಾಡಳಿತದಿಂದ ಸರ್ಕಾರದ ಸಕಲ ಗೌರವಗಳನ್ನು ಕೊಟ್ಟಿದ್ದೇವೆ. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, ಕುಟುಂಬ ಸದಸ್ಯರಿಗೆ ದುಃಖ ಸಹಿಸುವ ಶಕ್ತಿ ಕೊಡಲಿ – ಮಮತಾದೇವಿ, ಅಪರ ಜಿಲ್ಲಾಧಿಕಾರಿ, ಉಡುಪಿ.
ಅನೂಪ್ ಅವರು ಜಮ್ಮು ಕಾಶ್ಮೀರದಲ್ಲಿ ಎರಡು ವರ್ಷ ಸೇವೆ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಾವು ಜೊತೆಗೆ ಇದ್ದೆವು. ಕಾಶ್ಮೀರದ ಪೂಂಚ್‍ನಲ್ಲಿ ದಾಳಿ ನಡೆದ ಬಳಿಕ ಅಲ್ಲಿಗೆ ನೇಮಕ ಆದರು. ಪೂಂಚ್‍ನಲ್ಲಿ ಒಂದುವರೆ ವರ್ಷ ಸೇವೆ ಮಾಡಿದ್ದಾರೆ. ಕಾಶ್ಮೀರದ ಯೂನಿಟ್ ಮುಗಿಸಿ ಆರು ತಿಂಗಳಲ್ಲಿ ಗುಜರಾತಿಗೆ ಹೋಗಬೇಕಾಗಿತ್ತು. ಮಿಲಿಟರಿ ಸೇರಿ 13 ವರ್ಷ ಆಗಿದೆ ಇನ್ನು ನಾಲ್ಕು ವರ್ಷ ಸೇವೆ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಮಿನಿಮಮ್ ಸರ್ವಿಸ್ ಮಾಡದೆ ಬಂದರೆ ನನಗೆ ಬೆಲೆ ಇಲ್ಲ ಎಂದು ಹೇಳುತ್ತಿದ್ದ ಅನೂಪ್ ಪ್ರತಿದಿನ ನನಗೆ ಫೋನ್ ಮಾಡುತ್ತಾರೆ. ಮೊನ್ನೆ ಫೋನ್ ಬರದೇ ಇದ್ದಾಗ ನನಗೆ ಆತಂಕ ಶುರುವಾಯಿತು. ಕಾಶ್ಮೀರದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಅವರ ಫೋನ್ ಸ್ವಿಚ್ ಆಫ್ ಆಯ್ತು. ಮಿಲಿಟರಿ ವಾಹನ ಬಿದ್ದಿರುವ ಮಾಹಿತಿಯೂ ಗೊತ್ತಾಯ್ತು. ದಿನಪೂರ್ತಿ ಕಾದೆ. ಆಮೇಲೆ ಬೆಳಗ್ಗೆ ಮಾಹಿತಿ ಸಿಕ್ಕಿತು – ಮಂಜುಶ್ರೀ, ಅನೂಪ್ ಪತ್ನಿ