ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗ ಕೋಟೇಶ್ವರ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಾರಥ್ಯದಲ್ಲಿ ಶತ ಸಂಭ್ರಮ-2025 ಕಾರ್ಯಕ್ರಮ ಜನವರಿ 9ರಿಂದ ಜನವರಿ 11ರ ತನಕ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ವಿಠಲ ಕಾಮತ್ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ 1919 ಜನವರಿಯಲ್ಲಿ ಈ ಶಾಲೆ ಆರಂಭವಾಯಿತು. ಆಗ ಕೋಟೇಶ್ವರ ಸುತ್ತಮುತ್ತ ಎಲ್ಲ ಗ್ರಾಮಕ್ಕೂ ಈ ಶಾಲೆಯೇ ಪ್ರಮುಖವಾಗಿತ್ತು. ಆಗ ಒಂದೊಂದು ಶೈಕ್ಷಣಿಕ ವರ್ಷದಲ್ಲಿ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಲಕ್ಷಾಂತರ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 2019ರಲ್ಲಿ ಶತಮಾನೋತ್ಸವ ಆಚರಣೆ ಮಾಡಬೇಕಾಗಿತ್ತು. ಕೊರೋನಾ ಕಾರಣದಿಂದ ಆಗಲಿಲ್ಲ ಎಂದರು.
ಜ.9ರಂದು ಬೆಳಿಗ್ಗೆ 9 ಗಂಟೆಗೆ ಶತಮಾನೋತ್ಸವ 2025 ‘ಶತಪರ್ವ’ ಆರಂಭವಾಗಲಿದೆ. ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 5.30ರಿಂದ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ನಡೆಯಲಿದೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸುವರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೋಜನಶಾಲೆ ಉದ್ಘಾಟಿಸುವರು, ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸುವರು. ಬಳಿಕ ಶಾಲಾ ಮಕ್ಕಳಿಂದ ‘ನೃತ್ಯ ಸಿಂಚನ, ನಾಟಕ’ ಗುರುದಕ್ಷಿಣೆ, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಜ.10ರಂದು ಬೆಳಿಗ್ಗೆ 9ಕ್ಕೆ ಧ್ವಜಾರೋಹಣ, 9.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಯಿಂದ ಶಾಲಾ ಪ್ರಾಥಮಿಕ ವಿಭಾಗದ ಪ್ರತಿಭೆಗಳಿಂದ ನೃತ್ಯ ಸಿಂಚನ, ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಕ್ಕಳಿಂದ ಸಾಂಸ್ಕøತಿಕ ವೈಭವ, ಯಕ್ಷಗಾನ ‘ರಾಮಾಶ್ವಮೇಧ’ ಮತ್ತು ‘ಮೀನಾಕ್ಷಿ ಕಲ್ಯಾಣ’, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಜ.11ರಂದು ಬೆಳಿಗ್ಗೆ 9ಗಂಟೆಗೆ ಧ್ವಜಾರೋಹಣ, 9.30ಕ್ಕೆ ಸಭಾ ಕಾರ್ಯಕ್ರಮ, ಸಂಜೆ 5 ಗಂಟೆಗೆ ಶಾಲಾ ಪ್ರಾಥಮಿಕ ವಿಭಾಗದ ಪ್ರತಿಭೆಗಳಿಂದ ನೃತ್ಯ ಸಿಂಚನ, ಸಂಜೆ 6.30ರಿಂದ ಸಭಾ ಕಾರ್ಯಕ್ರಮ, ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಉಡುಪ ವಹಿಸಲಿದ್ದಾರೆ. ಬಳಿಕ ಯಕ್ಷಗಾನ ವೈಭವ ‘ಮಧುರ ಮಹೇಂದ್ರ’ ಪ್ರದರ್ಶನಗೊಳ್ಳಲಿದೆ. ಪೌರಾಣಿಕ ನಾಟಕ ‘ವಿಷಮ ರಣರಂಗ’, ನಂತರ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಕೆ.ಪಿ.ಎಸ್ ಕೋಟೇಶ್ವರದ ಮುಖ್ಯೋಪಾಧ್ಯಾಯರಾದ ಚಂದ್ರ ನಾಯ್ಕ್ ಹೆಚ್ ಮಾತನಾಡಿ, ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಶಾಲೆಗೆ ಸಾಕಷ್ಟು ಸೌಲಭ್ಯಗಳ ಒದಲಾವಣೆ ಮಾಡಿಕೊಳ್ಳಲಾಗಿದೆ. ಎಲ್ಲಾ ತರಗತಿಗಳಿಗೆ ಟೈಲ್ಸ್, ಸಭಾಭವನ ಮತ್ತು ಎಲ್ಲಾ ತರಗತಿಗಳ ದುರಸ್ತಿ, ಕಪಾಟು ಎಲ್ಲಾ ತರಗತಿಗಳಿಗೆ ಅಳವಡಿಕೆ, 100 ಸೆಟ್ ಬೆಂಚ್ ಡೆಸ್ಕ್ ಕೊಡುಗೆ, ಗ್ರೀನ್ ಬೋರ್ಡ್ ಪ್ರೋಜೆಕ್ಟರ್ ಕೊಡುಗೆ, 10 ಕಂಪ್ಯೂಟರ್, ಕಂಪ್ಯೂಟರ್ ಡೆಸ್ಕ್ ಕುರ್ಚಿ, ದಾಸ್ತಾನು ಕೊಠಡಿ ರಚನೆ, ಕಚೇರಿ ಸ್ಟಾಪ್ ರೂಮ್ ನವೀಕರಣ, 3500 ಚದರ ಅಡಿಯ ಸುಸಜ್ಜಿತ ಭೋಜನಶಾಲೆ, ಆವರಣಗೋಡೆ, ಸ್ವಾಗತ ಗೋಪುರ, ಶೌಚಾಲಯನ್ನು ಆಧುನಿಕ ಮಾದರಿಯಲ್ಲಿ ನವೀಕರಣ, ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ, ಆಧುನಿಕ ಹ್ಯಾಂಡ್ ವಾಶ್ ವ್ಯವಸ್ಥೆ, ಕ್ರೀಡಾಂಗಣ ಸಮತ್ತಟ್ಟು, ಎಲ್ಲಾ ಕೊಠಡಿ, ಸಭಾಭವನ, ಅಡುಗೆಕೋಣೆ ಸೇರಿ ಎಲ್ಲವನ್ನು ಸುಣ್ಣಬಣ್ಣದಿಂದ ಅಲಂಕರಿಸಲಾಗಿದೆ ಎಂದರು.
ಈ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ 117 ವಿದ್ಯಾರ್ಥಿಗಳು ದಾಖಲಾಗಿದ್ದು, ಒಟ್ಟು 485 ವಿದ್ಯಾರ್ಥಿಗಳು ಪೂರ್ವಪ್ರಾಥಮಿಕದಿಂದ 7ನೇ ತರಗತಿ ತನಕ ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಯಕ್ಷಗಾನ ತರಬೇತಿ, ಚಿತ್ರಕಲೆ, ಸಂಗೀತ, ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ಅಲ್ಲದೆ ವಾರದಲ್ಲಿ ಎರಡು ದಿನ ಮೌಲ್ಯ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ.ಸಿಯ ಅಶೋಕ್ ಗೋಪಾಡಿ ಉಪಸ್ಥಿತರಿದ್ದರು.