ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸರಕಾರಿ ಕಟ್ಟಡಗಳನ್ನು ತಮ್ಮ ರಾಜಕೀಯ ಲಾಭಗೋಸ್ಕರ ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ಕಾಂಗ್ರೆಸ್ ಪಕ್ಷ ಕಾನೂನುಬಾಹಿರವಾದ ಎಲ್ಲಾ ಚಟುವಟಿಕೆಗಳಿಗೆ ಅನುವು ಮಾಡಿಕೊಡಲು ಆರಂಭಿಸಿದನ್ನು ವಿರೋಧಿಸುತ್ತೇವೆ. ಕಾಂಗ್ರೆಸ್ ಒಂದು ಕಡೆ ಎಸ್‌ಡಿಪಿಐ ಯನ್ನು ನಿಷೇಧಿಸಬೇಕು, ಎಸ್‌ಡಿಪಿಐ ಸಮಾಜಘಾತುಕ ಶಕ್ತಿ, ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ ಅನ್ನುವುದನ್ನು ದೇಶಾದ್ಯಂತ ಹೇಳುತ್ತಿದೆ. ಎಸ್‌ಡಿಪಿಐ ಕಾಂಗ್ರೆಸ್‌ನ ನಾಶಕ್ಕೆ ಕಾರಣವಾಗುತ್ತಿದೆ ಎಂಬುದು ಸ್ವತ: ಕಾಂಗ್ರೆಸ್‌ಗೆ ಗೊತ್ತಿದೆ. ಆದರೆ ಅಧಿಕಾರಗೋಸ್ಕರ, ಪಂಚಾಯತ್ ಆಡಳಿಗೋಸ್ಕರ, ವ್ಯವಸ್ಥೆಗೋಸ್ಕರ, ಲಾಭಗೋಸ್ಕರ ತಾನು ಯಾವ ಸಂಘಟನೆಯನ್ನು ನಿಷೇಧ ಮಾಡಬೇಕು ಅಂತ ಹೇಳುತ್ತಿದೆಯೋ ಅದರ ಜೊತೆ ಅನೈತಿಕ ಸಂಬಂಧವನ್ನು ಮಾಡಿಕೊಳ್ಳುತ್ತದೆ. ತನ್ನ ಸೈದ್ಧಾಂತಿಕತೆಯನ್ನು ಮಾರಾಟ ಮಾಡಿ, ಅಧಿಕಾರ ಮಾತ್ರ ಮುಖ್ಯ ಎಂಬುದನ್ನು ಕಾಂಗ್ರೆಸ್ ತೋರಿಸಿಕೊಟ್ಟಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಹಿಂದು ಹಿತರಕ್ಷಣಾ ಸಮಿತಿ ಗಂಗೊಳ್ಳಿ ಇದರ ವತಿಯಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯ ಒಳಗೆ ಕಾನೂನುಬಾಹಿರವಾಗಿ ಪಂಚಾಯತ್ ಉಪಾಧ್ಯಕ್ಷ ಅಧಿಕಾರ ಸ್ವೀಕಾರ ಮಾಡುವ ಸಂದರ್ಭ ಮೌಲ್ವಿಗಳ ಮೂಲಕ ನಮಾಜ್, ಗಣಹೋಮ ಹಾಗೂ ಇತರ ಪೂಜಾ ವಿಧಿ ವಿಧಾನಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಕಛೇರಿ ಮುಂದೆ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಮಾಡಿಕೊಂಡು, ಎಲ್ಲರೂ ಸಮಾನರು ಎಂದು ಹೇಳುತ್ತಾ ಬಂದು, ವಿಪರೀತ ತುಷ್ಟೀಕರಣ ಮಾಡಿ ಹಿಂದುಗಳ ವ್ಯವಸ್ಥೆಯನ್ನು ತುಂಡು ಮಾಡಿ ಅನ್ಯಾಯವನ್ನು ಮಾಡುತ್ತಾ ಬಂದಿದೆ. ಹಿಂದುಗಳ ಭಾವನೆಗಳಿಗೆ, ವ್ಯವಸ್ಥೆಗಳಿಗೆ ಎಷ್ಟು ತೊಂದರೆಯಾದರೂ ಅಡ್ಡಿಲ್ಲ ತನಗೆ ಮಾತ್ರ ಆಡಳಿತ ಎಂಬುದನ್ನು ಕಾಂಗ್ರೆಸ್ ಮತ್ತೆ ಮತ್ತೆ ತೋರಿಸಿಕೊಟ್ಟಿದೆ. ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಎಸ್‌ಡಿಪಿಐ ಆಡಳಿತ ಹಿಡಿಯುವುದಗೋಸ್ಕರ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು, ಕಾನೂನುಬಾಹಿರ ಚಟುವಟಿಕೆ ನಡೆಸಲು ಬೆಂಬಲ ನೀಡುತ್ತಿರುವ ಕಾಂಗ್ರೆಸ್, ಯಾವುದೇ ತೊಂದರೆಗಳು ಆಗುತ್ತಾ ಬಂದರೂ ಯಾವುದನ್ನೂ ಕೇಳಲಾಗದ ಮೂಕಸ್ಥಿತಿಯಲ್ಲಿದೆ ಎಂದು ಲೇವಡಿ ಮಾಡಿದರು.
ಅಧಿಕಾರಕ್ಕಾಗಿ ತನ್ನ ಎಲ್ಲಾ ಸ್ವಾತಂತ್ರ್ಯವನ್ನು, ತನ್ನತನವನ್ನು ಮಾರಿಕೊಳ್ಳುವ ಕಾಂಗ್ರೆಸ್ ಪಕ್ಷ ಇಂದು ಮೂಕಪ್ರೇಕ್ಷಕ, ದಯನೀಯ ಪರಿಸ್ಥಿತಿಯಲ್ಲಿದೆ. ಗಂಗೊಳ್ಳಿಯ ಸಮಾಜ ಹಿಂದು ಸಮಾಜ ಇಂತಹ ಚಟುವಟಿಕೆಗಳನ್ನು ಸಹಿಸುದಿಲ್ಲ. ಸಮಾಜ ಜಾಗೃತವಾಗಿದೆ. ಸಮಾಜಗೋಸ್ಕರ ಎಷ್ಟೊತ್ತಿಗೆ ಬೇಕಾದರೂ ಎದ್ದು ಬರುವ ಸ್ವಭಾವವನ್ನು ಸಂಘಟನೆಗಳು ಇಟ್ಟುಕೊಂಡಿವೆ ಎಂದು ಅವರು ಹೇಳಿದರು.
ಬೈಂದೂರು ಕ್ಷೇತ್ರದಲ್ಲಿ ಕಳೆದ ಒಂದುವರೆ ವರ್ಷದಿಂದ ಗೋ ಕಳ್ಳತನ ಪ್ರಕರಣಗಳು ತುಂಬಾ ದಾಖಲಾಗುತ್ತಿದೆ. ಅಕ್ರಮವಾಗಿ ಮಸೀದಿಗಳು ನಿರ್ಮಿಸಿರುವ ಬಗ್ಗೆ ದೂರು ನೀಡಲಾಗಿದೆ. ಪರೋಕ್ಷವಾಗಿ ಇದರ ಹಿಂದೆ ಎಸ್‌ಡಿಪಿಐ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂತಹ ಎಸ್‌ಡಿಪಿಐಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿಕೊಂಡು ಅವರ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಗಂಗೊಳ್ಳಿ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಸಮಾಜದ ಸಾಮರಸ್ಯ, ಸ್ವಾಸ್ಥ್ಯ ಕೆಡಿಸುವ ಚಟುವಟಿಕೆಗಳು ಆರಂಭವಾಗಿದೆ. ಅಧಿಕಾರ ಸ್ವೀಕರಿಸಿದ ತಕ್ಷಣ ಪಂಚಾಯತ್ ಸರಕಾರಿ ಕಟ್ಟಡದ ಒಳಗಡೆ ಅನಧಿಕೃತವಾಗಿ ನಮಾಜ್ ಮಾಡಿದ್ದಾರೆ. ಅಧಿಕಾರಗೋಸ್ಕರ ತುಷ್ಟೀಕರಣ ಮಾಡುವುದನ್ನು ಸಮಾಜ ಸಹಿಸುದಿಲ್ಲ ಎಂದು ಹೇಳಿದ ಅವರು, ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು. ಜನವರಿ ಮೂರರಂದು ಬೆಳಿಗ್ಗೆ 7:30ಕ್ಕೆ ಕಾನೂನು ಬಾಹಿರವಾಗಿ ಪಂಚಾಯತ್ ಬಾಗಿಲು ತೆಗೆಸಿ, ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಮತ್ತು ಕೆಲವು ಸದಸ್ಯರು ಹಾಗೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮುಖಂಡರ ಜೊತೆ ಸೇರಿ ಆಕ್ರಮವಾಗಿ ಪಂಚಾಯತ್ ಕಛೇರಿ ಪ್ರವೇಶಿಸಿ ಗಣಹೋಮ ಮತ್ತು ಇತರ ಪೂಜಾ ವಿಧಿಯನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಾಜರಿದ್ದ ಪಂಚಾಯತ್ ಸದಸ್ಯರನ್ನು ಸದಸ್ಯ ಸ್ಥಾನದಿಂದ ಈ ಕೂಡಲೇ ವಜಾಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಮಾಡಬೇಕು. ಸರಕಾರಿ ಕಟ್ಟಡದ ಒಳಗೆ ಕಾನೂನುಬಾಹಿರ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಮನವಿಯನ್ನು ಕುಂದಾಪುರ ತಹಶೀಲ್ದಾರ್ ಮಲ್ಲಿಕಾರ್ಜುನ್ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ ಅವರಿಗೆ ಸಲ್ಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಗಂಗೊಳ್ಳಿ ಗ್ರಾಪಂ ಪಿಡಿಒ ಉಮಾಶಂಕರ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹರೀಶ್ ಆರ್. ಉಪಸ್ಥಿತರಿದ್ದರು.
ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವೀಂದ್ರ ಖಾರ್ವಿ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಉಮಾನಾಥ ದೇವಾಡಿಗ, ವಾಸುದೇವ ದೇವಾಡಿಗ, ಶ್ರೀಧರ ನಾಯ್ಕ್, ಗಂಗೊಳ್ಳಿ ಗ್ರಾಪಂ ಸದಸ್ಯರು, ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಚಂದ್ರ ಪಂಚವಟಿ, ರಾಘವೇಂದ್ರ ಗಾಣಿಗ, ಪ್ರೇಮಾ ಪೂಜಾರಿ, ಶಾಂತಿ ಖಾರ್ವಿ, ರಘುನಾಥ ಖಾರ್ವಿ, ನವೀನ ಗಂಗೊಳ್ಳಿ, ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.