ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಅವಿಭಜಿತ ದಕ್ಷಿಣ ಜಿಲ್ಲೆಯಲ್ಲಿ ಗಂಗೊಳ್ಳಿ ಬಹಳ ಸೂಕ್ಷ್ಮ ಪ್ರದೇಶ. ಯಾವುದೇ ವಿಚಾರಧಾರೆ ಮಾಡಿಕೊಳ್ಳಬೇಕಿದ್ದರೆ ಕಾನೂನಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಮಾಡಬೇಕಾದುದು ಜನಪ್ರತಿನಿಧಿಗಳ ಕರ್ತವ್ಯ. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಅಧಿಕಾರಿ ಸ್ವೀಕಾರ ಮಾಡುವಾಗ ಹಿಂದು ಸಂಪ್ರದಾಯದಂತೆ ಅವರ ಕಛೇರಿಯಲ್ಲಿ ಪೂಜೆ ಮಾಡಿ ಅಧಿಕಾರ ಸ್ವೀಕಾರ ಮಾಡುವುದು ಹಿಂದು ಸಂಪ್ರದಾಯದಲ್ಲಿ ನಡೆದುಕೊಂಡ ಬಂದ ಪದ್ಧತಿ. ಅದರಂತೆ ಗಂಗೊಳ್ಳಿ ಗ್ರಾಪಂ ಅಧ್ಯಕ್ಷರು ಅವರು ನಂಬಿದ ದೇವರ ಮೇಲೆ ನಂಬಿಕೆಯಿಂದ ಕಛೇರಿಯಲ್ಲಿ ಪೂಜೆ ಮಾಡಿದ್ದಾರೆ. ಅದರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಲು ಶಾಸಕರಿಗೆ ಯಾವುದೇ ಹಕ್ಕಿಲ್ಲ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬೈಂದೂರು ಶಾಸಕರ ಹಿಂದು ವಿರೋಧಿ ನೀತಿ ಖಂಡಿಸಿ ಗಂಗೊಳ್ಳಿ ಗ್ರಾಮ ಪಂಚಾಯತ್ ಕಛೇರಿ ಮುಂಭಾಗ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬರಿಕಾಲ ಸಂತ ಎಂದು ಹೆಸರು ಹೇಳಿ ತಿರುಗುತ್ತಿರುವ ಶಾಸಕರು ಮಾಡುವುದೆಲ್ಲ ಮಾಡುತ್ತಾರೆ, ತಿನ್ನುದೆಲ್ಲ ತಿನ್ನುತ್ತಾರೆ. ಶಾಸಕರ ಕಪಟವಾದ ಹಿಂದುತ್ವ, ನಾಟಕದ ಮುಖವಾಡ ಕಳಚಿ ಬಿದ್ದಿದೆ. ಹಿಂದುತ್ವ ಹೆಸರಿನಲ್ಲಿ ಗೆದ್ದು ಹೋದ ಬಳಿಕ ಗಂಗೊಳ್ಳಿಯ ಜನರಿಗೆ ಇದರ ಅರಿವಾಗಿದೆ. ಹಿಂದುಗಳ ಪೂಜೆ ಮಾಡಲು ವಿರೋಧ ಮಾಡುವಾಗ ಮುಂದಿನ ದಿನಗಳಲ್ಲಿ ಹಿಂದುತ್ವ ಹೆಸರಿನಲ್ಲಿ ಓಟ್ ಕೇಳುವ ನೈತಿಕತೆ ಅವರಿಗಿಲ್ಲ. ಶಾಸಕರಾದವರು ಗಂಗೊಳ್ಳಿ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಹೇಳಬೇಕೆ ವಿನಹ: ಹಿಂದುತ್ವ ಹೆಸರಿನಲ್ಲಿ ನಾಟಕ ಮಾಡಿ ಜನರನ್ನು ತಪ್ಪು ಜನರನ್ನು ಎಳೆಯಬಾರದು. ಶಾಸಕರಾಗಿ ಎರಡು ವರ್ಷಗಳಾಗುತ್ತಿದ್ದರೂ ಜನರ ಸಮಸ್ಯೆಗೆ ಸ್ಪಂದಿಸುವ ಒಂದು ಕೆಲಸ ಕೂಡ ಆಗಿಲ್ಲ. ಮಾಡಿದಿದ್ದರೆ ತೋರಿಸಿ ಎಂದು ಸವಾಲು ಅವರು ಹಾಕಿದರು.
ಗಂಗೊಳ್ಳಿಯಲ್ಲಿ ಸಾಮರಸ್ಯ ಮೂಡಿಸತಕ್ಕ ಕೆಲಸ ಮಾಡುವುದೇ ನಮ್ಮ ಉದ್ದೇಶ. ಇಲ್ಲಿ ಜಾತಿ ರಾಜಕಾರಣ ಇಲ್ಲ. ಜನರ ಸಮಸ್ಯೆಗೆ ಸ್ಪಂದಿಸುದೇ, ಅಭಿವೃದ್ಧಿಯೇ ನಮ್ಮ ಗುರಿ. ಗಂಗೊಳ್ಳಿ ಜನರು ಏನು ನ್ಯಾಯ ಕೇಳಿದ್ದಾರೆ, ಬೇಡಿಕೆ ಇಟ್ಟಿದ್ದಾರೆ ಅದನ್ನು ಸರಕಾರದ ಮೂಲಕ ಮಾಡಿಸುವ ಪ್ರಯತ್ನ ಮಾಡಲಾಗುವುದು. ಜಿಲ್ಲಾಧಿಕಾರಿಗಳನ್ನು ಇಲ್ಲಿಗೆ ಕರೆದುಕೊಂದು ಬಂದು ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ ಅವರು, ಶಾಸಕರು ಇದನ್ನು ಬಿಟ್ಟು ಜನರ ಹತ್ತಿರ ಹೋಗಿ, ಜನರ ಸಮಸ್ಯೆಗೆ ಸ್ಪಂದಿಸಿ ನಾವು ಅದಕ್ಕೆ ಬೆಂಬಲ ನೀಡುತ್ತೇವೆ. ಅದನ್ನು ಬಿಟ್ಟು ಟೀಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದರೆ ಅದಕ್ಕೆ ಜನರು ತಕ್ಕ ನೀಡುತ್ತಾರೆ. ಎಲ್ಲಾ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಹೇಳಿ ಹೆಸರಿಸಲ್ಲದೆ ಹಾಗೆ ಜನರು ಸೋಲನ್ನು ಕೊಟ್ಟಿದ್ದಾರೆ. ಇದು ಮತ್ತೆ ಪುನ: ಮುಂದುವರೆಯುತ್ತದೆ. ಇದಕ್ಕಿಂತ ಮುಂದುವರೆಸಿದರೆ ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಕುಮಾರ್ ಹುಕ್ಕೇರಿ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್. ಮೊದಲಾದವರು ಉಪಸ್ಥಿತರಿದ್ದರು.
ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯರು, ಮುಖಂಡರಾದ ಅನಂತ ಮೊವಾಡಿ, ಹರೀಶ ಕೊಡಪಾಡಿ, ಶೇಖರ ದೇವಾಡಿಗ, ರಾಜು ಪೂಜಾರಿ, ಉದಯ ಖಾರ್ವಿ ಕಂಚುಗೋಡು, ಗ್ರಾಪಂ ಮಾಜಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.