ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು – ದೀಪಕ್ ಕುಮಾರ್ ಶೆಟ್ಟಿ

0
495

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ಡಿ.10ರಂದು ನಡೆಯುವ ವಿಧಾನಪರಿಷತ್ ಚುನಾವಣೆಯ ದ.ಕ ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಪರ್ಧೆ ಮಾಡುತ್ತಿದ್ದು ಎರಡೂ ಜಿಲ್ಲೆಯಲ್ಲಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಬೈಂದೂರು ಕ್ಷೇತ್ರದಲ್ಲಿ 342 ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯರಿದ್ದು, ಆ ಎಲ್ಲಾ ಮತಗಳೂ ಶ್ರೀನಿವಾಸ ಪೂಜಾರಿಯರಿಗೆ ಚಲಾವಣೆ ಆಗುವುದರ ಜೊತೆಯಲ್ಲಿ ಪಕ್ಷೇತರರು ಮಾತ್ರವಲ್ಲದೇ ಹೆಚ್ಚುವರಿ ಮತಗಳು ಅವರಿಗೆ ಲಭಿಸಲಿದೆ ಎಂದು ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಹೇಳಿದರು.
ಅವರು ಹೆಮ್ಮಾಡಿಯ ಹೋಟೆಲ್ ಜ್ಯುವೆಲ್ ಪಾರ್ಕ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೋಟ ಶ್ರೀನಿವಾಸ ಪೂಜಾರಿಯವರು ಸ್ಥಳೀಯಾಡಳಿತ ಸಂಸ್ಥೆಗಳ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳದಲ್ಲಿ ಅವರ ಪ್ರಯತ್ನ, ಪ್ರಸ್ತುತ ಗ್ರಾ.ಪಂ.ಸದಸ್ಯರಿಗೆ 2000 ಗೌರವಧನ ನೀಡಬೇಕು ಎನ್ನುವ ನೆಲೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಬೆಂಬಲಿತ 3700 ಮತಗಳ ಅವರಿಗೆ ಲಭಿಸುವುದರಲ್ಲಿ ಅನುಮಾನವಿಲ್ಲ ಎಂದರು.

ಬೈಂದೂರು ಕ್ಷೇತ್ರದಲ್ಲಿ ಸಂಸದ ಬಿ.ವೈ ರಾಘವೇಂದ್ರ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ. ಹಾಗಾಗಿ ನಮಗೆ ಗ್ರಾ.ಪಂ.ಪಂಚಾಯತಿ ಸದಸ್ಯರಲ್ಲಿ ಮತ ಕೇಳಲು ಯಾವುದೇ ಮುಜುಗರವಿಲ್ಲ. ಬೈಂದೂರು ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಅತ್ಯುತ್ತಮವಾಗಿದ್ದು, ಸಂಘಟನಾತ್ಮಕವಾಗಿ ಚುನಾವಣೆ ಎದುರಿಸುತ್ತೇವೆ ಎಂದರು.

ಬೈಂದೂರು ಕ್ಷೇತ್ರದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಭಯ ಜನರಲ್ಲಿತ್ತು. ಈ ಬಗ್ಗೆ ಶಾಸಕರು ಸಂಸದರಿಗೆ ಮನವಿ ಮಾಡಿದಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಶನಿವಾರ ದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದ ಆಗುವ ಸಮಸ್ಯೆಗಳ ಹಾಗೂ ಮಾರ್ಪಾಡಿನ ಬಗ್ಗೆ ಚರ್ಚಿಸಿ, ವರದಿಯಲ್ಲಿ ಮಾರ್ಪಾಟು ಮಾಡುವಂತೆ ಮನವಿ ಸಲ್ಲಿಸಿದ್ದಾರೆ ಎಂದು ದೀಪಕ್ ಕುಮಾರ್ ಶೆಟ್ಟಿ ಎಂದರು.

Click Here

ಬೈಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆಗುತ್ತಿದೆ ಎನ್ನುವ ಬಗ್ಗೆ ಸಾರ್ವಜನಿಕ ದೂರುಗಳು, ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಶಾಸಕರ ಸಂಸದರೊಂದಿಗೆ ಮಾತುಕತೆ ನಡೆಸಿದ್ದು, ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಸೋಮವಾರ ಬೆಳಿಗ್ಗೆ ಶಾಸಕರು ಬೈಂದೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದ ಖಾರ್ವಿ, ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here