ತ್ರಾಸಿ :ಅವೈಜ್ಞಾನಿಕ ಲೈಟ್ ಫಿಶಿಂಗ್, ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿ ಹೆದ್ದಾರಿ ತಡೆದು ಪ್ರತಿಭಟನೆ

0
63

ಹತ್ತು ದಿನಗಳೊಳಗೆ ನಿಷೇಧ ಮಾಡದಿದ್ದರೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆಯ ಎಚ್ಚರಿಕೆ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಅವೈಜ್ಞಾನಿಕ ಲೈಟ್ ಫಿಶಿಂಗ್ (ಬೆಳಕು ಮೀನುಗಾರಿಕೆ), ಬುಲ್‍ಟ್ರಾಲ್ ಮೀನುಗಾರಿಕೆಯನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ತ್ರಾಸಿಯ ಕಡಲ ಕಿನಾರೆಯಲ್ಲಿ ಸಾವಿರಾರು ದೋಣಿಗಳನ್ನು ಲಂಗರು ಹಾಕಿ, ಕರಾವಳಿಯ 3 ಜಿಲ್ಲೆಗಳ 3 ಸಾವಿರಕ್ಕೂ ಮಿಕ್ಕಿ ಮೀನುಗಾರರಿಂದ ಬೃಹತ್ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿತು.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಕಳೆದ ಒಂದುವರೆ ವರ್ಷದಿಂದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಒಂದು ಮೀನುಗಾರಿಕೆ ಮನೆಗಳು ಮಂಜೂರಾಗಿಲ್ಲ. ಕಳೆದ ವರ್ಷ ಮಂಜೂರಾಗಿದ್ದ ಮನೆಗಳನ್ನು ಕೂಡ ತಡೆ ಹಿಡಿಯಲಾಗಿದೆ. ಕಳೆದ 3-4 ವರ್ಷಗಳಿಂದ ಮರವಂತೆ ಹೊರ ಬಂದರು ಮಂಜೂರಾದ ಅನುದಾನ ವಿವಿಧ ಕಾರಣಗಳಿಂದ ಬಳಕೆಯಾಗಿಲ್ಲ. ಗಂಗೊಳ್ಳಿ ಬಂದರು ಜೆಟ್ಟಿ ಪುನರ್ ನಿರ್ಮಾಣವಾಗಿಲ್ಲ ನಾಡದೋಣಿಯವರ ಕಷ್ಟ ಅರ್ಥಮಾಡಿಕೊಳ್ಳಬೇಕಾದುದು ಸರಕಾರದಿಂದ ಹಿಡಿದು ಸಮಾಜದ ಕರ್ತವ್ಯ. ಅವೈಜ್ಞಾನಿಕವಾಗಿ ನಡೆಯುತ್ತಿರುವ ಲೈಟ್ ಫಿಶಿಂಗ್ ಸಮಸ್ಯೆ ಬಗ್ಗೆ ಅಧಿಕಾರಿಗಳು ಹಾಗೂ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡು ಮೀನುಗಾರಿಕೆ ಹಾಗೂ ಮೀನುಗಾರರನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 1.5 ಲಕ್ಷ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿದ್ದು, ಅವೈಜ್ಞಾನಿಕ ಮೀನುಗಾರಿಕೆ ನಡೆಸುವುದರಿಂದ ನಾಳೆ ಸಮಸ್ಯೆಯಾಗುತ್ತದೆ. ತೊಂದರೆಯಾಗುತ್ತದೆ, ಬರಗಾಲ ಬರುತ್ತದೆ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಮೀನಿಗೆ ಬರಗಾಲ ಬಂದಾಗ ಚಿಂತೆ ಮಾಡಿ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ವೈಜ್ಞಾನಿಕವಾಗಿ, ಪ್ರಕೃತಿಗೋಸ್ಕರ ಸಾಂಪ್ರದಾಯಿಕ ರೀತಿಯಲ್ಲಿ ಮೀನುಗಾರಿಕೆ ನಡೆಸಬೇಕು. ಎಲ್ಲರೂ ದುಡಿಮೆಯನ್ನು ಹಂಚಿ ತಿನ್ನುವಂತಾಗಬೇಕು, ಮೀನುಗಾರರು ದಾರಿ ಮೇಲೆ ಬೀಳುವ ಪರಿಸ್ಥಿತಿ ಬರಬಾರದು ಎಂದು ಅವರು ಹೇಳಿದರು.
ಅವೈಜ್ಞಾನಿಕ ಮೀನುಗಾರಿಕೆ ನಿಷೇಧದ ಆದೇಶವನ್ನು ಅನುಷ್ಠಾನಗೊಳಿಸುವ ಸಂಬಂಧ ಕರಾವಳಿ ಜನರು ಪ್ರತಿಭಟನೆ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಬಿದ್ದ ಕಾನೂನು ಇನ್ನು ಮುಂದೆ ದಾರಿಗೆ ಬರಬೇಕು. ಬೋಟಿನವರಿಗೆ, ಸಚಿವರಿಗೆ, ಸರಕಾರಕ್ಕೆ ಬೇಜಾರಾಗುತ್ತದೆ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಅವೈಜ್ಞಾನಿಕವಾಗಿ ನಡೆಯುತ್ತಿರುವ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಬಗ್ಗೆ ಕ್ರಮಕೈಗೊಳ್ಳಲು ಮೀನುಗಾರರು ನೀಡಿರುವ ಗಡುವು ಮುಗಿಯುವುದರ ಒಳಗೆ ಕ್ರಮಕೈಗೊಳ್ಳಬೇಕು. ಸರಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಮೀನುಗಾರರ ಬಂಧುಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮುಲಾಜಿಲ್ಲದೆ ಮೀನುಗಾರರ ಜೊತೆ ಸೇರಿ ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೇಡಿಕೆಯನ್ನು ಸರಕಾರ, ಜಿಲ್ಲಾಡಳಿತ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಸರಕಾರದ ಆದೇಶ ಇಲ್ಲದೆ ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತಿರುವುದನ್ನು ಈಗಾಗಲೇ ಸಚಿವರು ಹಾಗೂ ಸರಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರಕಾರ ಪರಿಹಾರ ಹುಡುಕಿಕೊಡಬೇಕೆಂಬ ಒತ್ತಾಯ ಮಾಡಲಾಗುವುದು. ಸೀಮೆಎಣ್ಣೆ ಸಬ್ಸಿಡಿ ಹೆಚ್ಚಳ ಮಾಡುವ ಬಗ್ಗೆ ಬಜೆಟ್ ಮುಂಚಿತವಾಗಿ ಮುಖ್ಯಮಂತ್ರಿ ಮತ್ತು ಸಚಿವರು ಒಟ್ಟಿಗೆ ಇದ್ದಾಗ ಮನವಿ ಮಾಡಿಕೊಳ್ಳಲಾಗುವುದು. ಸಾಂಪ್ರದಾಯಿಕ ಮೀನುಗಾರರಿಗೆ ಆಗುತ್ತಿರುವ ಅನ್ಯಾಯ ಹಾಗೂ ನೋವನ್ನು ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ ಹಾಗೂ ಮೀನುಗಾರರ ರಕ್ಷಣೆ ನಿಲ್ಲುತ್ತೇವೆ ಎಂದು ಹೇಳಿದರು.
ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಉತ್ತರ ಕನ್ನಡ ಜಿಲ್ಲಾ ಒಕ್ಕೂಟದ ಸೋಮನಾಥ ಮೊಗೇರ ಮಾತನಾಡಿ, ಅಧಿಕಾರಿಗಳು ಮೀನುಗಾರರ ಕಷ್ಟ ಅರಿಯದೆ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸಣ್ಣ ಸಣ್ಣ ಮೀನುಗಾರರ ದಿಕ್ಕು ತಪ್ಪಿಸುತ್ತಿದ್ದಾರೆ. ಮೀನುಗಾರರನ್ನು ನಾಶ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರ ಹೊಟ್ಟೆ ತುಂಬಿಸಿ ಕಳುಹಿಸುತ್ತಿದ್ದೀರಿ. ಅಧಿಕಾರಿಗಳು ಮೀನುಗಾರರ ಮನೆಗೆ ಭೇಟಿ ಅವರ ಜೀವನವನ್ನು ನೋಡಬೇಕು. ಮೀನುಗಾರರು ಜೀವನ ನಡೆಸುವುದು ಕಷ್ಟವಾಗಿರುವ ಈ ದಿನಗಳಲ್ಲಿ ಅಧಿಕಾರಿಗಳಿಗೆ ಮಾನ, ಮರ್ಯಾದೆ, ನಾಚಿಕೆ ಇದ್ದರೆ, ಅನ್ನ ಉಣ್ಣುತ್ತಿದ್ದರೆ ಯಾವುದೇ ಒತ್ತಡಕ್ಕೆ ಒಳಗಾಗದೆ ರಾಜ್ಯ ಉಚ್ಛ ನ್ಯಾಯಾಲಯದ ಮತ್ತು ಸರಕಾರದ ಆದೇಶವನ್ನು ಸರಿಯಾಗಿ ಅನುಷ್ಠಾನ ಮಾಡಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ಮನೆಗೆ ನುಗ್ಗಿ ಮೀನು ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ ಮಾತನಾಡಿ, ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಯಂತ್ರಿಸಿ ನ್ಯಾಯ ಒದಗಿಸಬೇಕೆಂದು ಕಳೆದ 10 ವರ್ಷಗಳಿಂದ ಸಚಿವರ, ಅಧಿಕಾರಗಳ ಕಚೇರಿ ಅಲೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮೀನುಗಾರರ ಕೂಗು ಕೇಳುವವರಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಂದಿನ ದಿನಗಳಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಲಿದೆ. ಮೀನುಗಾರರು ಮನೆಯಲ್ಲೇ ಉಳಿದುಕೊಳ್ಳುವ ದಿನಗಳು ದೂರ ಉಳಿದಿಲ್ಲ. ಹೀಗಾಗಿ ಮೀನುಗಾರರನ್ನು ಮತ್ತು ಮೀನುಗಾರಿಕೆ ಉಳಿಸಬೇಕೆಂದು ಮೀನುಗಾರರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಸರಕಾರ ಮತ್ತು ಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮೀನುಗಾರಿಕೆ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ ಸೀಮೆಎಣ್ಣೆ ದರ ಮೀನುಗಾರರಿಗೆ ಬರೆ ಎಳೆದಿದ್ದು, ಸರಕಾರ ನೀಡುವ ಸಬ್ಸಿಡಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

Click Here

ದಕ್ಷಿಣ ಕನ್ನಡ ಜಿಲ್ಲೆಯ ವಸಂತ ಸುವರ್ಣ ಮಾತನಾಡಿ, ಬಂಡವಾಳಶಾಹಿಗಳಿಂದ ಅವೈಜ್ಞಾನಿಕ ಮೀನುಗಾರಿಕೆ ಹೆಚ್ಚು ನಡೆಯುತ್ತಿದೆ. ಮೀನುಗಾರರು ಸರಕಾರದಿಂದ ಯಾವುದೇ ಪರಿಹಾರವಾಗಲಿ ಆರ್ಥಿಕ ಸಹಾಯವಾಗಲಿ ಕೇಳಿಲ್ಲ. ಬದಲಾಗಿ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಯಂತ್ರಿಸಲು ಕೋರ್ಟ್ ಆದೇಶ ಪಾಲಿಸಬೇಕು, ಅನ್ಯಾಯಕ್ಕೊಳಗಾದ ಮೀನುಗಾರರಿಗೆ ನ್ಯಾಯ ಒದಗಿಸಿಕೊಡಬೇಕು, ನ್ಯಾಯಯುತ ಮೀನುಗಾರಿಕೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಒಕ್ಕೂಟದ ಗೌರವ ಸಲಹೆಗಾರ ನವೀನಚಂದ್ರ ಉಪ್ಪುಂದ ಮತ್ತು ಮದನ್ ಕುಮಾರ್ ಮಾತನಾಡಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಮಾತನಾಡಿ, ಕಾನೂನು ಪ್ರಕಾರ ಅಗತ್ಯ ಕ್ರಮವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಇದನ್ನು ಸರಿಪಡಿಸುವ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳ ಸೂಚನೆಯಂತೆ ರಚಿಸಲಾದ ಟಾಸ್ಕ್‍ಫೋರ್ಸ್ ಸಮಿತಿ ವರದಿ ನೀಡಿದೆ. ಕಾನೂನುಬಾಹಿರವಾಗಿ ಮೀನುಗಾರಿಕೆ ನಡೆಸಿದವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಉಡುಪಿ ಜಿಲ್ಲೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ಧಯ್ಯ ಮಾತನಾಡಿ, ಇತಿಮಿತಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಸಚಿವರು ಮತ್ತು ಮೇಲಧಿಕಾರಿಗಳ ಗಮನಕ್ಕೆ ತಂದು ಕಾನೂನುಪಾಲಿಸಲು ಬೇಕಾದ ಸೌಕರ್ಯಗಳನ್ನು ಪಡೆಯಲು ಮನವಿ ಮಾಡಿ, ಮೀನುಗಾರರ ಕಷ್ಟಗಳನ್ನು ಸಾಧ್ಯವಾದಷ್ಟು ನೀಗಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಬೆಳ್ಳಿಯಪ್ಪ, ಪೊಲೀಸ್ ವೃತ್ತ ನಿರೀಕ್ಷಕರಾದ ಸವಿತ್ರತೇಜ, ಜಯರಾಮ ಗೌಡ, ಸಹಾಯಕ ನಿರ್ದೇಶಕರಾದ ಅಂಜನಾದೇವಿ, ಸುಮಲತಾ, ದಿವಾಕರ ಖಾರ್ವಿ ಉಪಸ್ಥಿತರಿದ್ದರು.
ಮೀನುಗಾರ ಮುಖಂಡರಾದ ಅಶ್ವಥ ಕಾಂಚನ್ ಮಂಗಳೂರು, ಕೃಷ್ಣ ಮುರ್ಡೇಶ್ವರ, ಬಲೀಂದ್ರ ಶಿರೂರು, ಅಜೀಜ್ ಗಂಗೊಳ್ಳಿ, ಸುರೇಶ ಖಾರ್ವಿ ಮರವಂತೆ, ವೆಂಕಟರಮಣ ಖಾರ್ವಿ ಉಪ್ಪುಂದ, ರಾಮ ಖಾರ್ವಿ, ಪ್ರವೀಣ ಕುಮಟಾ ಹಾಗೂ ಮೂರು ಜಿಲ್ಲೆಗಳ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಪದಾಧಿಕಾರಿಗಳು, ಮೀನುಗಾರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೆಲಕಾಲ ರಾಷ್ಟ್ರೀಯ ಹೆದ್ದಾರಿ 66ನ್ನು ತಡೆದು ಪ್ರತಿಭಟನೆ ನಡೆಸಿದ ಮೀನುಗಾರರು ನ್ಯಾಯಕ್ಕಾಗಿ ಆಗ್ರಹಿಸಿದರು. ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಸಾವಿರಕ್ಕೂ ಮಿಕ್ಕಿ ಮೀನುಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗಂಗೊಳ್ಳಿ, ಮರವಂತೆ, ಉಪ್ಪುಂದ ಭಾಗದ ನಾಡದೋಣಿ ಮೀನುಗಾರರು ನೂರಾರು ನಾಡದೋಣಿಯಲ್ಲಿ ಬಂದು ತ್ರಾಸಿ ಕಡಲ ತೀರದಲ್ಲಿ ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.

ಗಂಗೊಳ್ಳಿ ಪಿಎಸ್‍ಐ ಹರೀಶ್ ಆರ್. ಮತ್ತು ಬಸವರಾಜ್ ಕನಶೆಟ್ಟಿ ನೇತೃತ್ವದಲ್ಲಿ ಸುಮಾರು 13 ಪೊಲೀಸ್ ಉಪನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

Click Here

LEAVE A REPLY

Please enter your comment!
Please enter your name here