ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದಾಪುರ ತಾಲೂಕಿನ ಶ್ರೀ ಕ್ಷೇತ್ರ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.22ರಿಂದ 24ರವರೆಗೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದ ಸಭಾಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರದಲ್ಲಿ ಸ್ವರ್ಣಾರೂಢ ಪ್ರಶ್ನಾಚಿಂತನೆ ಮತ್ತು ಕ್ಷೇತ್ರದ ದೇವಿಯ ಅಪ್ಪಣೆ ಮೇರೆಗೆ ಶ್ರೀ ಭದ್ರಮಹಾಕಾಳಿ ದೇವಿಯ ಭವ್ಯವಾದ ರಕ್ತಚಂದನದ ನೂತನ ದಾರುಬಿಂಬವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಬ್ರಹ್ಮಶ್ರೀ ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ ಕಮ್ಮರಡಿ ನೇತೃತ್ವದಲ್ಲಿ ಧಾರ್ಮಿಕ ಅನುಷ್ಠಾನಗಳು ನಡೆಯಲಿದೆ. ಕೋಟೇಶ್ವರದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅವರು ದೇವಿಯ ರಕ್ತಚಂದನದ ನೂತನ ದಾರು ಬಿಂಬದ ಕೆತ್ತನೆಯನ್ನು ಮಾಡಿದ್ದಾರೆ. ಆ.20ರಂದು ದೇವಿಯ ರಕ್ತಚಂದನದ ನೂತನ ದಾರು ಬಿಂಬದ ಶೋಭಾಯಾತ್ರೆಯು ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಶಿಯಿಂದ ಹೆಮ್ಮಾಡಿ ತನಕ ವಾಹನ ಜಾಥಾ ಮೂಲಕ, ಹೆಮ್ಮಾಡಿಯಿಂದ ದೈವಸ್ಥಾನದ ತನಕ ಕಾಲ್ನಡಿಗೆಯಲ್ಲಿ ಪುರಮೆರವಣಿಗೆ ನಡೆಯಲಿದೆ. 21ರಂದು ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
22ರಂದು ಗುರು ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಳ್ಳಲಿದೆ. 23ರಂದು ಶ್ರೀ ಭದ್ರಮಹಾಕಾಳಿ ಮೊದಲ್ಗೊಂಡು ಎಲ್ಲಾ 39 ಬಿಂಬಗಳಿಗೆ ಅಧಿವಾಸ ಪೂಜೆ, ಹೋಮ ಹವನಗಳು, ಸಂಜೆ ಕಲಶ ಪ್ರತಿಷ್ಠೆ, ಬ್ರಹ್ಮಕುಂಭ ಪ್ರತಿಷ್ಠೆ ನಡೆಯಲಿದೆ. 24ರಂದು ಬೆಳಿಗೆ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತಚಂದನದ ದಾರು ಬಿಂಬ ಪ್ರತಿಷ್ಠಾಪನೆ, ಜೀವಕುಂಭ ಅಭಿಷೇಕ, ಬ್ರಹ್ಮಕುಂಭಾಭಿಷೇಕ, ಅಮ್ಮನವರ ದರ್ಶನ, ಮಹಾ ಅನ್ನಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮಧ್ಯಾಹ್ನ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಧಾರ್ಮಿಕ ಮುಖಂಡ ಬಿ.ಅಪ್ಪಣ್ಣ ಹೆಗ್ಡೆ ಶುಭಾಶಂಸನೆಗೈಯಲಿದ್ದು, ಸಚಿವ ಮಂಕಾಳು ವೈದ್ಯ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ನಾಡೋಜ ಡಾ.ಜಿ.ಶಂಕರ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ರಾತ್ರಿ 8 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ವಹಿಸಲಿದ್ದು, ಶಾಸಕರಾದ ಗುರುರಾಜ ಗಂಟಿಹೊಳೆ, ಗುರ್ಮೆ ಸುರೇಶ ಶೆಟ್ಟಿ, ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಆನಂದ ಸಿ.ಕುಂದರ್, ಯು.ಬಿ.ಶೆಟ್ಟಿ ಉಪ್ಪುಂದ, ಉದಯ ಕುಮಾರ್ ಶೆಟ್ಟಿ ಕಾರ್ಕಳ, ಸಿ.ಸದಾಶಿವ ಶೆಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. 25ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೆ.ಆನಂದ ಶೆಟ್ಟಿ, ಮಹಾ ದಾನಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುವುದು. ಹೆಮ್ಮಾಡಿ ಸರ್ಕಲ್ ಮತ್ತು ನೆಂಪು ಸರ್ಕಲ್‍ನಿಂದ ದೈವಸ್ಥಾನಕ್ಕೆ ಬರುವವರಿಗೆ ಉಚಿತ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 10 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಶತಮಾನದಲ್ಲೇ ಅತ್ಯಪೂರ್ವವಾದ ಈ ಪುಣ್ಯತಮ ಕಾರ್ಯದಲ್ಲಿ ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅವರು ಹೇಳಿದರು.
ಆಡಳಿತ ಸಮಿತಿ ಉಪಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ, ದೈವಸ್ಥಾನದ ಇತಿಹಾಸ, ದೈವಸ್ಥಾನ ಬೆಳೆದು ಬಂದ ಪರಿಯನ್ನು ವಿವರಿಸಿದರು. ಅಧ್ಯಕ್ಷ ಕೆ.ಆನಂದ ಶೆಟ್ಟಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮೊಕ್ತೇಸರ ಬಿ.ವಿಠಲ ಶೆಟ್ಟಿ, ಶ್ರೀಧರ ಶೆಟ್ಟಿ, ಮಂಜು ಶೆಟ್ಟಿ, ಶೇಖರ ಬಳೆಗಾರ್, ಕಾರ್ಯದರ್ಶಿ ಚಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.