ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ ಮಹೋತ್ಸವ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಂಬಿಕೆ, ಶಕ್ತಿ ವ್ಯಾಪಕವಾಗಿದೆ. ಉನ್ನತ ಶಕ್ತಿಯೊಂದಕ್ಕೆ ತಲೆಬಾಗಿ ಬದುಕುವ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಬೇಕು. ಅಣುರೇಣುತೃಣಕಾಷ್ಟಗಳಲ್ಲಿಯೂ ಭಗವಂತನ ಕಾಣುತ್ತೇವೆ. ದೇವದೈವಗಳ ಶಕ್ತಿಯ ಅಸ್ತಿತ್ವವನ್ನು ಕಾಣುತ್ತೇವೆ. ಇಂಥಹ ಆರಾಧನಾ ಶಕ್ತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ಶ್ರೀಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನದ ನೂತನ ದಾರುಬಿಂಬದ ಪ್ರತಿಷ್ಠೆ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇ.ಮೂ.ಬ್ರಹ್ಮಶ್ರೀ ಕೆ.ಎಸ್ ಲಕ್ಷ್ಮೀನಾರಾಯಣ ಸೋಮಯಾಜಿ ಕಮ್ಮರಡಿ ಧಾರ್ಮಿಕ ಉಪನ್ಯಾಸ ನೀಡಿ, ಕಷ್ಟ, ನಷ್ಟ, ರೋಗ ರುಜಿನ, ವ್ಯಥೆ ಮನುಷ್ಯ ಸಹಜವಾದುದು. ಪುಣ್ಯ ಕಾರ್ಯದಿಂದ ಸುಖದ ಅಪೇಕ್ಷೆ ಪಡುತ್ತೇವೆ. ಪುಣ್ಯದ ಫಲವಾಗಿ ಸುಖ ಪ್ರಾಪ್ತವಾಗಬೇಕಾದರೆ ಭಗವಂತನ ಅನುಗ್ರಹ ಅಗತ್ಯ. ಪ್ರಾಮಾಣಿಕತೆ, ಸತ್ಯ, ಧರ್ಮಶ್ರದ್ಧೆ ಅನುಸರಿಸುವುದರಿಂದ ಜನ್ಮ ಸಾರ್ಥಕತೆಯಾಗುತ್ತದೆ. ನಾವು ಪಡೆಯುವ ಸಂಸ್ಕಾರ ನಮ್ಮನ್ನು ಉನ್ನತಿಯತ್ತ ತಲುಪಿಸುತ್ತದೆ ಎಂದು ಹೇಳಿದ ಅವರು ದೇವರ ಆರಾಧನೆಯಲ್ಲಿ ವೇದಮಂತ್ರಗಳು ಸಮಸ್ತ ಲೋಕದ ಸುಖಶಾಂತಿಯನ್ನೆ ಬಯಸುತ್ತವೆ. ವೇದಮಂತ್ರದಲ್ಲಿ ಏಕವಚನಕ್ಕೆ ಅವಕಾಶವಿರುವುದಿಲ್ಲ. ಬಿಂಬದಲ್ಲಿ ಸಾನಿಧ್ಯ ಅನುಗ್ರಹಿಸಿ ಸಮಸ್ತರನ್ನು ಸಂರಕ್ಷಿಸುವ ಎಂದು ದೇವಿಯಲ್ಲಿ ಬೇಡಿಕೊಳ್ಳುತ್ತೇವೆ ಎಂದರು.
ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಕೆ.ಗೋಪಾಲ ಪೂಜಾರಿ, ಆಡಳಿತ ಸಮಿತಿ ಅಧ್ಯಕ್ಷರಾದ ಕೆ.ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 25 ವರ್ಷಗಳ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಮುಂಬಯಿ ದೀಪಕ್ ಹಾಸ್ಪಿಟಲ್ ನ ಡಾ.ಭಾಸ್ಕರ ಶೆಟ್ಟಿ ಕೂಕನಾಡು, ವಿಜಯ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ಕೆ.ವಿಠಲ ಶೆಟ್ಟಿ ಕಟ್ ಬೇಲ್ತೂರು, ಉದಯ ನಾರಾಯಣ ಪೂಜಾರಿ, ಪಾಂಡುರಂಗ ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶಂಕರ ಶೆಟ್ಟಿ ಕೂಕನಾಡು, ಚಂದ್ರಶೇಖರ ಶೆಟ್ಟಿ, ಪ್ರಭಾಕರ ಪೂಜಾರಿ, ಸಂದೀಪ ಪೂಜಾರಿ, ಸಂಜಯ ಪೂಜಾರಿ, ಸತೀಶ್ ಶೆಟ್ಟಿ ಹೆಗ್ಡೆಯವರಮನೆ, ಅನಿಲ್ ಸುನೀಲ್, ಡಾ.ರಾಮಕೃಷ್ಣ ಕುಲಾಲ್ ಬೆಂಗಳೂರು, ಜಗದೀಶ ಶ್ರೀಯಾನ್ ಬಟ್ಟೆಕುದ್ರು, ಸುರೇಶ, ಮಾಧವ ಪೂಜಾರಿ, ಡಾ.ಭಾಸ್ಕರ ಶೆಟ್ಟಿ ಕೂಕನಾಡು, ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಸುಬ್ಬಣ್ಣ ಶೆಟ್ಟಿ ನಾಗಯ್ಯ ಶೆಟ್ರಮನೆ, ಬಿ.ಭಾಸ್ಕರ ಶೆಟ್ಟಿ ವಾಸ ಶೆಟ್ರಮನೆ, ಹೈಗುಳಿ ಪಾತ್ರಿಗಳಾದ ರವಿ ನಾಯ್ಕ, ಅಮ್ಮನವರ ಪಾತ್ರಿ ಗೋವಿಂದ ಪೂಜಾರಿ, ಅರ್ಚಕರಾದ ದೊಟ್ಟ ಪೂಜಾರಿ, ಜೋಗಿ ಸಮಾಜದ ಶೇಖರ ಬಳೆಗಾರ್, ಕಾರ್ಯದರ್ಶಿ ಚಂದ್ರ ನಾಯ್ಕ್ ಉಪಸ್ಥಿತರಿದ್ದರು.
ವಿನಯ ಆಚಾರ್ಯ ಪ್ರಾರ್ಥನೆ ಮಾಡಿದರು. ಆಡಳಿತ ಸಮಿತಿ ಅಧ್ಯಕ್ಷ ಕೆ.ಆನಂದ ಶೆಟ್ಟಿ ಸ್ವಾಗತಿಸಿದರು. ಸೀತಾರಾಮ ಶೆಟ್ಟಿ ಹೆಗ್ಡೆಯವರ ಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕ ಡಾ.ಕಿಶೋರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಜ.24 ಶುಕ್ರವಾರ ಬೆಳಿಗ್ಗೆ ಶ್ರೀ ಭದ್ರಮಹಾಕಾಳಿ ದೇವಿಯ ಭವ್ಯವಾದ ರಕ್ತ ಚಂದನದ ದಾರು ಬಿಂಬ ಪ್ರತಿಷ್ಠಾಪನೆ ನಡೆಯಿತು. ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಅಮ್ಮನವರ ದರ್ಶನ ನಡೆಯಲಿದೆ. ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವಸಂತ ನಾಟ್ಯಾಲಯ ಕುಂದಾಪುರ ಇವರಿಂದ ನೃತ್ಯ ಸಿಂಚನ ನಡೆಯಿತು.