ಕುಂದಾಪುರದಲ್ಲಿ 76ನೆ ಗಣರಾಜ್ಯೋತ್ಸವ ಸಂಭ್ರಮ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಪ್ರಜಾಪ್ರಭುತ್ವದ ಮತ್ತೊಂದು ಹೆಸರೇ ಭಾರತ. ಇಡೀ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶವೇ ಭಾರತ. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರು ಸಮಾನರು. ಹಾಗಾಗಿ ಸಮಾನತೆಯನ್ನು ಎತ್ತಿ ಹಿಡಿಯಬೇಕಾಗುತ್ತದೆ. ಸ್ವಾತಂತ್ರ್ಯ, ಸಮಾನತೆ, ಏಕತೆ, ಭ್ರಾತೃತ್ವ ಮೊದಲಾದ ಮೌಲ್ಯಗಳನ್ನು ನೀಡಿದ ನಮ್ಮ ಸಂವಿಧಾನ ನಮ್ಮ ದೇಶದ ಏಕತೆ ಹಾಗೂ ಹೆಮ್ಮೆಯ ಪ್ರತೀಕವಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ. ಮಹೇಶ್ಚಂದ್ರ ಹೇಳಿದರು.
ಕುಂದಾಪುರ ತಾಲೂಕು ಆಡಳಿತ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ 76ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ-2025ದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹಲವಾರು ದೇಶಪ್ರೇಮಿಗಳು, ಸಾಹಸ ಹಾಗೂ ಬಲಿದಾನದ ಮೂಲಕ ನಮ್ಮ ದೇಶ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದರೂ ಕೂಡ ನಮ್ಮ ದೇಶ ಗಣರಾಜ್ಯವಾಗಿ ಬದಲಾಗಿ ಎರಡು ವರ್ಷವೇ ಹಿಡಿಯಿತು. ನಮ್ಮ ಸಂವಿಧಾನವು ಭಾರತದ ಪ್ರಜೆಗಳಿಗೆ ಹಲವಾರು ಮೂಲಭೂತ ಹಕ್ಕುಗಳನ್ನ ನೀಡಿದ್ದು, ಇದಕ್ಕೆ ಚ್ಯುತಿ ಬಾರದಂತೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ನಮ್ಮ ಸಂವಿಧಾನವು ನಮ್ಮ ರಾಷ್ಟ್ರದ ಸರ್ವೋಚ್ಛ ಕಾನೂನು ಆಗಿದ್ದು ಅದಕ್ಕೆ ಎಲ್ಲರೂ ಗೌರವಿಸಬೇಕಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಕ್ರೀಡೆಯಲ್ಲಿ ಸಾಧನೆಗೈದ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕøತರ ಇಬ್ಬರು ಕೃಷಿಕರನ್ನು ಹಾಗೂ ಪೌರ ಕಾರ್ಮಿಕರನ್ನು ಅಭಿನಂದಿಸಲಾಯಿತು. ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕುಂದಾಪುರ ಪುರಸಭೆ ವತಿಯಿಂದ ಲ್ಯಾಪ್ ಟಾಪ್ ವಿತರಿಸಲಾಯಿತು.
ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ತಾ, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಯುವಜನ ಮತ್ತು ಸಬಲೀಕರಣ ಇಲಾಖೆ ಅಧಿಕಾರಿ ಕುಸುಮಾಕರ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಆನಂದ ಜಿ., ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ, ಕುಂದಾಪುರ ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಪೌರ ಕಾರ್ಮಿಕರು ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸಾದ್ ನೇತೃತ್ವದಲ್ಲಿ ವಿವಿಧ ಶಾಲೆಗಳ, ಎನ್‍ಸಿಸಿ, ಸ್ಕೌಟ್ಸ್, ಗೈಡ್ಸ್, ಸೇವಾದಳ ವಿದ್ಯಾರ್ಥಿಗಳು ಹಾಗೂ ಪೌರಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಕುಂದಾಪುರ ತಹಶೀಲ್ದಾರ್ ಮಲ್ಲಿಕಾರ್ಜುನ್ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.