ಕುಂದಾಪುರ ಮಿರರ್ ಸುದ್ದಿ…
ಉಡುಪಿ : ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ , ಫೈನಾನ್ಸ್ ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗಳು ನೀಡುವ ಮಾರ್ಗದರ್ಶನಗಳು ಹಾಗೂ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದ ಗ್ರಾಹಕರಿಗೆ ಕಿರುಕುಳದಂತಹ ಪ್ರಕರಣಗಳು ಪತ್ರಿಕೆಗಳಲ್ಲಿ ಕೇಳಿ ಬರುತ್ತಿವೆ. ಇದಕ್ಕೆಲ್ಲಾ ಕಾರಣ ಮಾರ್ಗಸೂಚಿಗಳು ಹಾಗೂ ನಿಯಮಗಳ ಪಾಲಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದರು.
ಮೈಕ್ರೋ ಫೈನಾನ್ಸ್ಗಳು ಸಾಲ ಕೊಡುವ ಮುನ್ನ ಸಾಲಗಾರರ ಕುಟುಂಬದ ಆದಾಯ ಸೇರಿದಂತೆ ಮತ್ತಿತರ ಪೂರ್ವಾಪರಗಳನ್ನು ಪರಿಶೀಲನೆಯನ್ನು ಮಾಡಿ, ಅವರ ಆದಾಯದ ಶೇ. 50 ರಷ್ಟು ಮಾತ್ರ ಸಾಲ ನೀಡಬೇಕು. ಆದರೆ, ಅವರು ಸಾಲ ತೆಗೆದುಕೊಳ್ಳುವ ಸಾಮರ್ಥ್ಯ ನೋಡದೇ ಸಾಲವನ್ನು ನೀಡಿರುವ ಬಗ್ಗೆ ಕಂಡುಬರುತ್ತಿದೆ. ಇವುಗಳಿಗೆ ಆಸ್ಪದ ನೀಡಬಾರದು. ಸಾಲ ನೀಡುವವರು ಹಾಗೂ ತೆಗೆದುಕೊಳ್ಳುವವರು ಇಬ್ಬರೂ ಸಹ ಆರ್ಥಿಕ ಶಿಸ್ತನ್ನು ಪಾಲಿಸಬೇಕು ಎಂದರು.
ಆರ್.ಬಿ.ಐ ಮಾರ್ಗಸೂಚಿಯ ಪ್ರಕಾರ ಮೈಕ್ರೋ ಫೈನಾನ್ಸ್ಗಳು 3 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ಮರುಪಾವತಿಯನ್ನು ಕಾನೂನಿನ ಅನ್ವಯ ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನನ್ನು ಉಲ್ಲಂಘಿಸಿ, ದೌರ್ಜನ್ಯ, ಕೆಟ್ಟ ಪದಗಳಲ್ಲಿ ಬೈಯುವುದು, ದಬ್ಬಾಳಿಕೆ, ಕಿರುಕುಳ ನೀಡುವುದು ಮಾಡಿದ್ದಲ್ಲಿ ಅಂತಹವರ ವಿರುದ್ಧ ಪೊಲೀಸ್ ನವರು ಸೊಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ ಎಂದು ಎಚ್ಚರಿಸಿದರು.
ಅದೇ ರೀತಿ ಸಾಲ ನೀಡಿದ ಫೈನಾನ್ಸ್ಗಳ ವಿರುದ್ಧ ತಿರುಗಿ ಬೀಳುವುದು ಅಥವಾ ಸಾಲ ಪಡೆದವರ ಮೇಲೆ ಫೈನಾನ್ಸ್ಗಳು, ಕಾನೂನು ಉಲ್ಲಂಘಿಸಿ ತಿರುಗಿ ಬಿದ್ದಲ್ಲಿ ಅಂತಹವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರು ಮೈಕ್ರೋ ಫೈನಾನ್ಸ್ ಸಂಬಂಧಿತ ಕಿರುಕುಳ ದೂರುಗಳನ್ನು ಕಂಟ್ರೋಲ್ ರೂಂ ಸಂಖ್ಯೆ: 0820-2574802 ಗೆ ಕಚೇರಿ ವೇಳೆಯಲ್ಲಿ ನೀಡಬಹುದಾಗಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಮಾತನಾಡಿ, ಮೈಕ್ರೋ ಫೈನಾನ್ಸ್ಗಳಲ್ಲಿ ತೆಗೆದುಕೊಳ್ಳುವ, ಕೊಡುವ ವ್ಯವಹಾರಗಳು ಶಾಂತಿಯುತವಾಗಿ ಆಗಬೇಕು. ಸಾಲ ವಸೂಲಾತಿಗಾಗಿ ಫೈನಾನ್ಸ್ ಕಂಪನಿಗಳು ಬೆಳಗ್ಗೆ 9 ಕ್ಕೂ ಮುನ್ನ ಸಂಜೆ 6 ರ ನಂತರ ಸಾಲಗಾರರ ಮನೆಗೆ ಹೋಗಬಾರದು. ಯಾವುದೇ ರೀತಿಯ ದೌರ್ಜನ್ಯಗಳನ್ನು ನಡೆಸಬಾರದು. ಒಂದೊಮ್ಮೆ ಉಲ್ಲಂಘಿಸಿದ್ದಲ್ಲಿ ಅಂಹವರ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸಹಾಯಕ ಕಮೀಷನರ್ ಮಹೇಶ್ಚಂದ್ರ, ಲೀಡ್ ಬ್ಯಾಂಕ್ ಮೆನೇಜರ್ ಹರೀಶ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರುಗಳು, ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.