ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ದೇವರು ಅವತಾರ ಎತ್ತಿಬಂದ ಸಂಚರಿಸಿದ ಭೂಮಿ ಭಾರತ. ಮನುಷ್ಯನ ಬದುಕು ಭಾವ, ರಾಗ, ತಾಳಗಳು ಮೇಳೈಸಿದ ಸಂಗೀತವಾಗಬಹುದಾದರೆ ಅದು ಭಾರತದಲ್ಲಿ ಮಾತ್ರ ಸಾಧ್ಯ. ಅಂತಹ ಪುಣ್ಯ ಭೂಮಿಯಲ್ಲಿ ನಾವು ಬದುಕುತ್ತಿದ್ದೇವೆ. ಜ್ಞಾನದ ಬೆಳಕಿನಿಂದ ಬೆಳಗುವ ಎಲ್ಲಾ ಜೀವ ರಾಶಿಗಳಲ್ಲಿ ಒಂದು ಸಂತೋಷವನ್ನು ಜಾಗೃತವಾಗಿರಿಸಬಹುದಾದ ಪವಿತ್ರ ನದಿಗಳ ಅವತರಣಕ್ಕೆ ಆಶ್ರಯವಾದ ಭೂಮಿ ಭಾರತ. ಪ್ರತಿಯೊಬ್ಬರೊಳಗೆ ನಿನಗೊಬ್ಬ ಬಂಧುವಿದ್ದಾನೆ, ತಾಯಿ ಇದ್ದಾಳೆ, ಜನ್ಮಕೊಟ್ಟ ತಂದೆಯ ಸ್ಥಾನದ ಪ್ರೀತಿ ಇದೆ. ದೇವರಿದ್ದಾರೆ ಎಂದು ತೋರಿಸಿಕೊಟ್ಟಿದ್ದೇ ಭಾರತೀಯ ಪರಂಪರೆ ಎಂದು ಪ್ರಸಿದ್ಧ ವಾಗ್ಮಿ ಎನ್.ಆರ್. ದಾಮೋದರ ಶರ್ಮಾ ಹೇಳಿದರು.
ಎಂ.ಎಂ. ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಪ್ರವರ್ತಿತ ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲು ಇವರ ವತಿಯಿಂದ ಶನಿವಾರ ಜರಗಿದ ಮಾತೃವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಾವಿದ್ದ ಸ್ಥಿತಿಯಲ್ಲಿ ಸಂತೋಷ ಪಡಬೇಕು. ಇನ್ನೊಬ್ಬರ ಹೋಲಿಕೆ ಮಾಡಿ ನಾವು ಮಾನಸಿಕವಾಗಿ ದೌರ್ಬಲ್ಯ ಹೊಂದಬಾರದು. ಐದು ಬೆರಳುಗಳು ಒಳ್ಳೆಯ ಭಾವನೆಯಿಂದ ಜೊತೆಯಾದಾಗ ಮಾತ್ರ ಒಂದು ತುತ್ತು ಊಟ ಮಾಡಲು ಸಾಧ್ಯವಾಗುತ್ತದೆ. ಐದೂ ಬೆರಳುಗಳು ಧೈರ್ಯದಿಂದ ಗಟ್ಟಿಯಾದಾಗ ಮಾತ್ರ ಅದು ಮುಷ್ಠಿಯಾಗುತ್ತದೆ. ಆದ್ದರಿಂದ ಸಾಮಾಜಿಕ ಬದುಕಿನಲ್ಲಿ ಈ ತರತಪಗಳನ್ನು ಮರೆತು ಒಳ್ಳೆಯ ಭಾವನೆಯಿಂದ ಒಟ್ಟಾದಾಗ ನಮ್ಮ ಬದುಕು. ಸಾಮಾಜಿಕ ಕರ್ತವ್ಯ ಗಟ್ಟಿಯಾಗುತ್ತದೆ. ನಾವು ಅನ್ಯೋನ್ಯವಾಗಿ ಬದುಕಿ ಮುಷ್ಠಿಯಾಗಲು ಸಾಧ್ಯವಾಗುತ್ತದೆ ಎಂದರು.
ನಮ್ಮ ಸಮಾಜದ ನಡುವೆ ನಾವು ಆದರ್ಶಗಳನ್ನು ಹುಡುಕಬೇಕಿದ್ದರೆ ರಾಮಾಯಣ, ಮಹಾಭಾರತ, ಭಾಗವತ ಓದಬೇಕು ಮತ್ತು ನಮ್ಮ ಪಕ್ಕದಲ್ಲಿರುವವರ ಬದುಕಿನ ಆದರ್ಶಗಳನ್ನು ನೋಡುತ್ತಿರಬೇಕು. ತಾಯಿಯ, ತಂದೆಯ, ಬಂಧುಗಳ ಗುರುಗಳ ಬಗ್ಗೆ ಯೋಚನೆ ಮಾಡುತ್ತಾ ನಮ್ಮ ಬದುಕು ಕಟ್ಟಿಕೊಳ್ಳಬೇಕು.
ಬದುಕಿನ ಯಶಸ್ಸಿಗೆ ಪ್ರೇರಣೆಯೇ ತಾಯಿ. ಸಾಧಕರಾದವರು ಜೀವನಪೂರ್ತಿ ಸಾಂಸಾರಿಕ ಬದುಕಿನಿಂದ ವಿಮುಕ್ತರಾಗಿ ನಿಂತಾಗ ಅವರು ಆರಾಧಿಸುವ ದೇವರಲ್ಲೂ ಕಾಣಿಸಿದ್ದೂ ತಾಯಿ. ಜಗತ್ತಿನಲ್ಲಿ ಎಲ್ಲವನ್ನು ಬದಲಾವಣೆ ಮಾಡಬಹದು. ಆದರೆ ಅಪ್ಪ ಅಮ್ಮನನ್ನು ಬದಲಾವಣೆ ಮಾಡಲು ಸಾಧ್ಯವೇ ಇಲ್ಲ. ಆದ್ದರಿಂದ ಬದುಕಿನ ಸರ್ವಶ್ರೇಷ್ಠ ತಾಯಿಯನ್ನು ವರ್ಣಿಸಲು ಸಾಧ್ಯವಿಲ್ಲ. ಇಂತಹ ತಾಯಿಯನ್ನು ಪ್ರತಿನಿತ್ಯ ಪೂಜಿಸಬೇಕು. ಅವರ ಆಶೀರ್ವಾದದಿಂದಲೇ ನಮ್ಮ ಜೀವನ ಸಾರ್ಥಕವಾಗುತ್ತದೆ, ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.
ಎಂ.ಎಂ. ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಮಹೇಶ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ನ್.ಆರ್. ದಾಮೋದರ ಶರ್ಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ತಂದೆ ತಾಯಂದಿರ ಪಾದಪೂಜೆ ನಡೆಸಿ, ಪುಷ್ಪಾರ್ಚನೆ ಮಾಡಿ, ಆರತಿ ಬೆಳಗಿ, ಅಪ್ಪ ಅಮ್ಮನಿಗೆ ಸಿಹಿ ತಿನಿಸಿ ನಮಿಸಿ ಆಶೀರ್ವಾದ ಪಡೆದುಕೊಂಡರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಉಪನ್ಯಾಸಕಿ ದಿವ್ಯಾ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರ್ವಹಿಸಿದರು. ಹೈಸ್ಕೂಲು ವಿಭಾಗದ ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ.ಆಚಾರ್ಯ ವಂದಿಸಿದರು.