ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ, ಫೆ.10 : ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಸಂದರ್ಭ ನಿರೀಕ್ಷೆ ಜಾಸ್ತಿ ಇತ್ತು. ಆದರೆ ಸಮಬಲ ಕಂಡುಕೊಂಡಿತ್ತು. ಸುಮಾರು 11 ಬಾರಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ ಶೀನ ಪೂಜಾರಿ ಅವರಿಗೆ ಸೂಕ್ತ ಸ್ಥಾನಮಾನವನ್ನು ಕಾಂಗ್ರೆಸ್ ಪಕ್ಷ ನೀಡಲಿಲ್ಲ. ಶೀನ ಪೂಜಾರಿ ಅವರು ಒಳ್ಳೆಯ ತೀರ್ಮಾನವನ್ನು ತಗೆದುಕೊಂಡು ಭಾರತೀಯ ಜನತಾ ಪಕ್ಷಕ್ಕೆ ಬಂದಿದ್ದಾರೆ. ಇಲ್ಲಿಯ ತನಕ ಜನರಿಗೆ ತನ್ನಿಂದಾದ ಸೇವೆ ನೀಡುತ್ತಾ ಬಂದವರು. ಒಳ್ಳೆಯ ಹೆಸರನ್ನು ಹೊಂದಿದ್ದಾರೆ ಎಂದು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕುಂದಾಪುರ ಮಂಡಲ ಬಿಜೆಪಿ ಕಛೇರಿಯಲ್ಲಿ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾದ ಶೀನ ಪೂಜಾರಿ ಅವರ ಅಧಿಕೃತ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕರು ಮತ್ತು ಮಂಡಲ ಅಧ್ಯಕ್ಷರು ಶೀನ ಪೂಜಾರಿ ಅವರಿಗೆ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿಕೊಂಡರು.
ಬಿಜೆಪಿಗೆ ಸೇರ್ಪಡೆಗೊಂಡ ಶೀನ ಪೂಜಾರಿ ಮಾತನಾಡಿ, 11 ಬಾರಿ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದೇನೆ. ಗ್ರಾಮ ಪಂಚಾಯತ್ ಸದಸ್ಯನಾಗಿಯೂ ಸೇವೆ ಸಲ್ಲಿಸಿದ್ದೇನೆ. ಆದರೆ ನನಗೆ ಸರಿಯಾದ ಅವಕಾಶವನ್ನು ಕಾಂಗ್ರೆಸ್ ಪಕ್ಷ ನೀಡಲಿಲ್ಲ. ಜನರ ಪರವಾಗಿ ಕೆಲಸ ಮಾಡಲು ಸೂಕ್ತ ಅವಕಾಶಗಳು ಬೇಕಿತ್ತು ಎಂದರು.
ಮಂಡಲದ ಅಧ್ಯಕ್ಷರಾದ ಸುರೇಶ ಶೆಟ್ಟಿ ಗೋಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೀನ ಪೂಜಾರಿ, ಉಪಾಧ್ಯಕ್ಷ ಸಂಜೀವ ಪೂಜಾರಿ ಅವರನ್ನು ಅಭಿನಂದಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಜಿಲ್ಲಾ ಉಪಾಧ್ಯಕ್ಷರಾದ ಕಾಡೂರು ಸುರೇಶ ಶೆಟ್ಟಿ, ಪುರಸಭೆ ಅಧ್ಯಕ್ಷರಾದ ಮೋಹನದಾಸ್ ಶೆಣೈ, ಉಪಾಧ್ಯಕ್ಷೆ ವನಿತಾ ಎಸ್.ಬಿಲ್ಲವ, ಮಂಡಲದ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್ ಉಪಸ್ಥಿತರಿದ್ದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.