ಕುಂದಾಪುರ ಮಿರರ್ ಸುದ್ದಿ…
ಬಸ್ರೂರು ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದಿಂದ “ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ” ಆಚರಣೆ – ಭವ್ಯ ಶೋಭಾಯಾತ್ರೆ
ಕುಂದಾಪುರ : ದೇವರು, ದೇಶ ಮತ್ತು ಧರ್ಮ ಈ ಮೂರು ನೀತಿಗಳ ಮೇಲೆ ಛತ್ರಪತಿ ಶಿವಾಜಿ ಮಹಾರಾಜರು ರಾಜ್ಯಭಾರ ಮಾಡಿದ್ದರು. ದೇವರು ಉಳಿದರೆ ಧರ್ಮ ಉಳಿಯುತ್ತದೆ. ಧರ್ಮ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂಬುದನ್ನು ಮನಗಂಡಿದ್ದ ಶಿವಾಜಿ ಮಹಾರಾಜರು ಗೋ ಬ್ರಾಹ್ಮಣ ಪ್ರತಿಪಾಲಕರಾಗಿದ್ದರು. ಈ ರಾಜ್ಯ ಮತ್ತು ರಾಷ್ಟ್ರ ದೇವರಿಗಾಗಿ, ಜನರಿಗಾಗಿ, ಗೋಬ್ರಾಹ್ಮಣ ಪ್ರತಿಪಾದಕರಿಗಾಗಿ ಎಂದು ನಂಬಿದ್ದರು. ಶಿವಾಜಿ ಮಹಾರಾಜರ ಜನನ, ರಾಜ್ಯಾಭಿಷೇಕ ಮಹಾರಾಷ್ಟ್ರದಲ್ಲಿ ಆಗಿದ್ದರೂ, ರಾಷ್ಟ್ರದ ದಿಲ್ಲಿಯಲ್ಲಿ ಮರಾಠ ಸಾಮ್ರಾಜ್ಯ, ಹಿಂದವೀ ಸ್ವರಾಜ್ ಸ್ಥಾಪನೆಯಾಗಬೇಕೆಂದು ಕನಸು ಕಂಡಿದ್ದರು. ಮೊಘಲರು, ಪೋರ್ಚುಗೀಸರು, ಬ್ರಿಟಿಷ್, ಡಚ್ಚರು ಇವೆಲ್ಲರ ವಿರುದ್ಧ ಹೋರಾಟ ನಡೆಸಿ ದಾಳಿಕೋರರನ್ನು ಹಿಮ್ಮೆಟ್ಟಿಸಿ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ನೀಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಸಿಂಧದುರ್ಗ ಜಿಲ್ಲೆಯಿಂದ ಇಲ್ಲಿಯವರೆಗೆ ಬಂದು ಪೋರ್ಚುಗೀಸರಿಂದ ಬಸ್ರೂರು ಗ್ರಾಮವನ್ನು ಸ್ವತಂತ್ರಗೊಳಿಸಿದ್ದರು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗರಾವ್ ಸಾವಂತ್ ಹೇಳಿದರು.
ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗ ಬಸ್ರೂರು ಇವರ ಆಶ್ರಯದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ನಡೆದ ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವುದು ಅತ್ಯಗತ್ಯ. ಬಸ್ರೂರಿನ ಜನರು ಫೆ.13ರಂದು ಸ್ವಾತಂತ್ರ್ಯ ದಿನಾಚರಣೆ ಮಾಡುವುದು ಸಮಂಜಸವಾದುದು. ಶಿವಾಜಿ ಮಹಾರಾಜರಿಗೆ ಬಸ್ರೂರಿನ ಜನರು ಬೆಂಬಲ ನೀಡಿದ್ದರಿಂದ ಬಸ್ರೂರು ಸ್ವತಂತ್ರವಾಗಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಿವಾಜಿ ಮಹಾರಾಜರ ಕಾರ್ಯನೀತಿ ಈಗಿನ ಕೇಂದ್ರ ಸರಕಾರ ಕೂಡ ಪಾಲಿಸುತ್ತಿದೆ. ಶಿವಾಜಿ ಮಹಾರಾಜರ ರಾಜಮುದ್ರೆ ಮೋದಿಯವರ ಕಾಲದಲ್ಲಿ ನೌಕಾದಳದಲ್ಲಿ ಬಳಸಲಾಗುತ್ತಿದೆ. ಅಂತ್ಯೋದಯ ತತ್ವವನ್ನು ಪಾಲಿಸುತ್ತಿದ್ದ ಶಿವಾಜಿ ಮಹಾರಾಜರು ಎಲ್ಲರನ್ನು ಸಮಾನರಂತೆ ನೋಡುತ್ತಿದ್ದರು. ಸಮಾಜದಲ್ಲಿ ಯಾರೂ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಎಲ್ಲರ ಮನೆಗೂ ನೀರು, ಶೌಚಾಲಯ, ವಿಮೆ, ಗ್ಯಾಸ್ ಸಂಪರ್ಕ, ಪಡಿತರ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಶಿವಾಜಿ ಮಹಾರಾಜರ ಅಂತ್ಯೋದಯ ಕಾರ್ಯನೀತಿಯನ್ನು ಅನುಸರಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ದೇಶದಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಪಡಿಸಲು 60 ವರ್ಷ ಬೇಕಾಯಿತು. ದೇಶದಲ್ಲಿ ಕಳೆದ 60 ವರ್ಷಗಳಲ್ಲಿ ನೀಡಲಾಗದ ಮೂಲಭೂತ ಸೌಕರ್ಯಗಳನ್ನು ಕಳೆದ 10 ವರ್ಷಗಳಲ್ಲಿ ನರೇಂದ್ರ ಮೋದಿಯವರು ನೀಡಿ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿಕಸಿತ ರಾಷ್ಟ್ರ ಶಿವಾಜಿ ಮಹಾರಾಜರ ಕನಸು. ಬಸ್ರೂರಿನಂತಹ ಗ್ರಾಮ ಪಂಚಾಯತ್ ಮೂಲಕ ಆರಂಭವಾಗಿರುವ ಈ ಆಂದೋಲನ ಯಶಸ್ವಿಯಾಗುವ ವಿಶ್ವಾಸವಿದೆ. ಬಸ್ರೂರಿನಲ್ಲಿ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಿಸಬೇಕೆಂಬ ಸ್ಥಳೀಯರ ಬೇಡಿಕೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಬಸ್ರೂರಿನಲ್ಲಿ ಶಿವಾಜಿ ಮಹಾರಾಜರ ನೆನಪಿಗೆ ನೇವಲ್ ಅಕಾಡೆಮಿ ಅಥವಾ ಸ್ಮಾರಕ ನಿರ್ಮಾಣ ಮಾಡಲು ನರೇಂದ್ರ ಮೋದಿ ಸರಕಾರ ಸಿದ್ಧವಿದ್ದು, ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿ, ಸ್ಥಳೀಯ ಜನಪ್ರತಿನಿಧಿಗಳು ಮುಂಚೂಣಿಯಲ್ಲಿ ನಿಂತು ಈ ಕೆಲಸ ಮಾಡಬೇಕಿದೆ ಎಂದರು.
ಭಾರತೀಯ ಸಂತಸಭಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್‍ರಾಜ್ ಮಹದೇವರಾವ್ ಮಹಿಂದ್ ಪುಣೆ ಮಾತನಾಡಿದರು. ರಾಷ್ಟ್ರೀಯವಾದಿ ನಾಟಕಕಾರ ಅಡ್ಡಂಡ ಸಿ.ಕಾರ್ಯಪ್ಪ ದಿಕ್ಸೂಚಿ ಭಾಷಣ ಮಾಡಿದರು.
ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ಕಾರ್ಯದರ್ಶಿ ರಾಕೇಶ್ ಜಿ.ಕೆಳಮನೆ, ಗಂಗೊಳ್ಳಿ ವಲಯ ಪ್ರಮುಖ್ ಟಿ.ವಾಸುದೇವ ದೇವಾಡಿಗ, ಸಂಚಾಲಕ ಸುಧೀರ್ ಮೇರ್ಡಿ ಉಪಸ್ಥಿತರಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಯಶಪಾಲ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಬ್ರಹ್ಮಣ್ಯ ಹೊಳ್ಳ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ಅಧ್ಯಕ್ಷ ಉಮೇಶ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾರಿಕಾ ಅಶೋಕ್ ಕಾರ್ಯಕ್ರಮ ನಿರ್ವಹಿಸಿದರು.
ಗಂಗೊಳ್ಳಿಯಿಂದ ದೋಣಿ ಮೂಲಕ ಸಾಗಿಬಂದ ಶೋಭಾಯಾತ್ರೆಯು ಬಸ್ರೂರು ಮಂಡಿಕೇರಿ ಹೊಳೆಬಾಗಿಲಿನಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ನಡೆಯಿತು.