ಭಾರತ್ ಸ್ಕೌಟ್ಸ್-ಗೈಡ್ಸ್ ರ್ಯಾಲಿ, ಕಬ್ಸ್ – ಬುಲ್ ಬುಲ್ ಉತ್ಸವ-2025
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ, ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರ ನೇತೃತ್ವದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆದ ಭಾರತ್ ಸ್ಕೌಟ್-ಗೈಡ್ಸ್ ರ್ಯಾಲಿ, ಕಬ್ಸ್-ಬುಲ್ ಬುಲ್ ಉತ್ಸವ-2025 ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷೆ ಶೋಭಾ ಶೆಟ್ಟಿ ಮಾತನಾಡಿ, ರಾಷ್ಟ್ರ ರಕ್ಷಣೆ ಮತ್ತು ಸ್ವಯಂ ಶಿಸ್ತಿಗೆ ಭಾರತ್ ಸ್ಕೌಟ್ & ಗೈಡ್ಸ್ ಹೆಚ್ಚು ಪ್ರೇರಣಾದಾಯಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸ್ಕೌಟ್ & ಗೈಡ್ಸ್, ಕಬ್ಸ್ ಬುಲ್ ಬುಲ್ ಜೊತೆಗೆ ಗುರುತಿಸಿಕೊಂಡು ಬೆಳೆಯುವಂತಾಗಲಿ ಎಂದು ಹಾರೈಸಿದರು.
ಭಾರತ್ ಸ್ಕೌಟ್ & ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಇವರನ್ನು ಗೌರವಿಸಲಾಯಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಸಂಸ್ಥೆ ಅಧ್ಯಕ್ಷೆ ಗುಣರತ್ನ, ಸ್ಕೌಟ್ & ಗೈಡ್ಸ್ ಶಿಸ್ತು, ಸಂಯಮ, ದೇಶಪ್ರೇಮವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕು. ಪ್ರತಿಯೊಂದು ಚಟುವಟಿಕೆ ಕೂಡಾ ಶಿಸ್ತಿನಿಂದ ಕೂಡಿರಬೇಕು. ವ್ಯಕ್ತಿತ್ವ ವಿಕಾಸವಾಗಲು ಸೌಟ್ ಗೈಡ್ಸ್ ಸಹಕಾರಿಯಾಗುತ್ತದೆ ಎಂದು ಹೇಳಿದ ಅವರು, ಶೀಘ್ರದಲ್ಲಿಯೇ ಜಿಲ್ಲಾ ಮಟ್ಟದಲ್ಲಿ ಎರಡು ದಿನಗಳ ಕಾಲ ಯಾಲಿಯನ್ನು ಆಯೋಜಿಸಲಾಗುವುದು. ರಾಜ್ಯ ಸಂಸ್ಥೆ ನೀಡಿದ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದೇವೆ. ಪಿ.ಜಿ ಆರ್ ಸಿಂಧ್ಯಾ ಅವರು ನಿರಂತರ ಸಲಹೆ ಸೂಚನೆ ನೀಡುತ್ತಿದ್ದಾರೆ ಎಂದರು.
ಆನೆಗುಡ್ಡೆ ಶ್ರೀ ವಿನಾಯಕ ಸಭಾಭವನದ ಮಾಲಕ ರವಿರಾಜ ಉಪಾಧ್ಯಾಯ, ಭಾರತ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲೆ ಸಂಸ್ಥೆಯ ರೇಖಾ ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ & ಗೈಡ್ಸ್ ನ ಶಿಕ್ಷಕ ವೀರೇಂದ್ರ ಸ್ವಾಗತಿಸಿ, ಶಿಕ್ಷಕಿ ತಾರ ವಂದಿಸಿದರು. ಭಾರತ್ ಸ್ಕೌಟ್ & ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಆನಂದ ಅಡಿಗ ಪ್ರಾಸ್ತಾವಿಸಿದರು. ಸದಾನಂದ ಶೆಟ್ಟಿ ನಿರೂಪಿಸಿದರು.