ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಂಧನ ಸಾಗಿಸುತ್ತಿರುವ ಟ್ಯಾಂಕರ್ ನಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದಾಗ ಒಬ್ಬ ಚಾಲಕ ಸಿಕ್ಕಿ ಬಿದ್ದಿದ್ದು, ಡೀಸೆಲ್ ಖರೀದಿಸುತ್ತಿದ್ದ ವ್ಯಕ್ತಿ ತಪ್ಪಿಸಿಕೊಂಡ ಘಟನೆ ಸಿದ್ಧಾಪುರದಲ್ಲಿ ನಡೆದಿದೆ. ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಯನ್ನು ಟ್ಯಾಂಕರ್ ಚಾಲಕ ಜಯರಾಮ ಎಂದು ಗುರುತಿಸಲಾಗಿದೆ. ತಪ್ಪಿಸಿಕೊಂಡಿರುವ ವ್ಯಕ್ತಿಯನ್ನು ಸ್ಥಳೀಯ ಸರ್ವೀಸ್ ಸ್ಟೇಷನ್ ಮಾಲೀಕ ವಿಜಯ್ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಸುಬ್ಬರಾವ್ ಕಾಂಫ್ಲೆಕ್ಸ್ ನಲ್ಲಿರುವ ಸರ್ವಿಸ್ ಸ್ಟೇಷನ್ ನಲ್ಲಿ ಡಿಸೇಲ್ ಟ್ಯಾಂಕರ್ ಗಳಿಂದ ಅಕ್ರಮವಾಗಿ ಡಿಸೇಲನ್ನು ಕ್ಯಾನ್ ಗಳಿಗೆ ವರ್ಗಾಯಿಸಿ ಕಳ್ಳತನ ಮಾಡುತ್ತಿರುವುದಾಗಿ ಶಂಕರನಾರಾಯಣ ಪೊಲಿಸರಿಗೆ ಮಾಹಿತಿ ಬಂದಿದ್ದು, ಅದರಂತೆ ಶಂಕರನಾರಾಯಣ ಎಸೈ ನಾಸೀರ್ ಹುಸೇನ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ಸಿದ್ದಾಪುರ-ಅಂಪಾರು ಮುಖ್ಯ ರಸ್ತೆಯಿಂದ ಹೊಂಡಾ ಶೋ ರೂಂ ಬದಿಯಲ್ಲಿ ಹೋಗುವ ಕಾಲು ದಾರಿಯಲ್ಲಿ ಸರ್ವಿಸ್ ಸ್ಟೇಷನ್ ಪಕ್ಕದ ಖಾಲಿ ಜಾಗದಲ್ಲಿ ಇಂಧನ ಸಾಗಿಸುವ ಒಂದು ಟ್ಯಾಂಕರ್ ನಿಂತಿದ್ದು ಟ್ಯಾಂಕರ್ ಬಳಿ ಜಯರಾಮ ಎಂಬಾತ ನಿಂತಿದ್ದು ಅದೇ ವಾಹನದ ಇಂಧನ ಟ್ಯಾಂಕ್ ನಿಂದ ಪೈಪ್ ಹಾಗೂ ಜಾಕ್ ಬಳಸಿ ಕ್ಯಾನಗಳಿಗೆ ಇಂಧನವನ್ನು ತುಂಬಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಟ್ಯಾಂಕರ ಬಳಿ ಇದ್ದ ಚಾಲಕನ ಬಳಿ ವಿಚಾರಿಸಿದಾಗ ಪ್ರತಿ ಡಿಸೇಲ್ ಟ್ಯಾಂಕನಿಂದ 20 ಲೀಟರ್ ಡಿಸೇಲನ್ನು ಕಳವು ಮಾಡಿ ಆಪಾದಿತ ಸಿದ್ದಾಪುರದ ವಿಜಯ ಎಂಬಾತನಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾನೆ. ಮತ್ತೊಬ್ಬ ಆರೋಪಿ ವಿಜಯ ತಪ್ಪಿಸಿಕೊಂಡಿದ್ದಾನೆ. ಟ್ಯಾಂಕರ್ ನ ಡಿಸೇಲ್ ಟ್ಯಾಂಕಿನ ಬಳಿ ಇದ್ದ ಕ್ಯಾನ್ ನಲ್ಲಿ ಸುಮಾರು 20 ಲೀಟರ್ ಡಿಸೇಲ್ ಪತ್ತೆಯಾಗಿದೆ. ಅಲ್ಲದೇ ಸವೀಸ್ ಸ್ಟೇಷನ್ ಬಳಿ 1020 ಲೀಟರ್ ಡಿಸೇಲ್, 30 ಲೀಟರ್ ಪೆಟ್ರೋಲ್, 3 ಪೈಪ್ ಗಳು, ಹಾಗೂ ಒಂದು ಡಿಸೇಲ್ ತೆಗೆಯುವ ಲಿಪ್ಟ್ ಮೋಟಾರನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ.