ಕುಂದಾಪುರ :ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್ಪ್ರೆಸ್ ಮತ್ತು ಎರ್ನಾಕುಲಂ ನಿಜಾಮುದ್ಧಿನ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆ – ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯಿಂದ ಅದ್ದೂರಿ ಸ್ವಾಗತ.

0
234

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ : ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಬೇಕೆಂಬ ಬಹಳಷ್ಟು ವರ್ಷಗಳ ಹಿಂದಿನ ಬೇಡಿಕೆಗೆ ರಾಜ್ಯ ಸರಕಾರ ಭಾಗಶ: ಒಪ್ಪಿಗೆ ನೀಡಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ರಾಜ್ಯ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಶಾಸಕರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ಮಂಗಳೂರಿನಿಂದ ಗೋವಾಗೆ ಹೋಗುವ ರೈಲನ್ನು ವಂದೇ ಭಾರತ್ ರೈಲನ್ನು ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಳಿಸಬಾರದು ಬದಲಾಗಿ ಈ ರೈಲನ್ನು ಮುಂಬೈಗೆ ವಿಸ್ತರಿಸಬೇಕೆಂಬ ಮನವಿಯನ್ನು ಮಾಡಿಕೊಳ್ಳಲಾಗಿದೆ. ಮಂಗಳೂರನ್ನು ರೈಲ್ವೆ ವೃತ್ತವನ್ನಾಗಿ ಮಾಡಬೇಕೆಂಬ ಬೇಡಿಕೆಗೂ ಸರಕಾರ ಸಕಾರಾತ್ಮವಾಗಿ ಸ್ಪಂದಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ವತಿಯಿಂದ ಎರ್ನಾಕುಲಂ ನಿಜಾಮುದ್ಧಿನ್ ಎಕ್ಸಪ್ರೆಸ್ ಮತ್ತು ತಿರುವನಂತಪುರಂ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲನ್ನು ಕುಂದಾಪುರ ರೈಲ್ವೇ ನಿಲ್ದಾಣದಲ್ಲಿ ಶನಿವಾರ ಸ್ವಾಗತಿಸಿ ಅವರು ಮಾತನಾಡಿದರು.

ಉಡುಪಿ ರೈಲ್ವೆ ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆಯಡಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಕಾರವಾರದವರೆಗೆ ಮತ್ತೊಂದು ರೈಲನ್ನು ನೀಡಬೇಕೆಂದು ಬೇಡಿಕೆ ಇಡಲಾಗಿದೆ. ಅರೆಬೆಟ್ಟದಲ್ಲಿ ಸ್ವಲ್ಪ ಅಭಿವೃದ್ಧಿ ಮಾಡಿ ನಿಯಮ ಸರಳೀಕರಣ ಮಾಡಿದರೆ ಬರುವ ರೈಲುಗಳು ಸರಾಗವಾಗಿ ಬರಲು ಅನುಕೂಲವಾಗುತ್ತದೆ ಎಂಬುದನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದ ಅವರು ಕುಂದಾಪುರದಲ್ಲಿ ರೈಲ್ವೆಗೆ ನೀರು ತುಂಬಿಸುವ ಯೋಜನೆಗೆ ಪ್ರಸ್ತಾಪವನ್ನು ಸಲ್ಲಿಸಲಾಗಿದ್ದು, ಕುಂದಾಪುರ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.

Click Here

Click Here

ಕುಂದಾಪುರ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಹಾಗೂ ಕರಾವಳಿ ಭಾಗದ ರೈಲ್ವೆಗೆ ಕೇಂದ್ರ, ರಾಜ್ಯ ಸರಕಾರಗಳು ಹಾಗೂ ಸಾರ್ವಜನಿಕರು ಮಹತ್ವದ ಕೊಡುಗೆಗಳನ್ನು ನೀಡುತ್ತಿದೆ. ಕರಾವಳಿ ಭಾಗದ ಜನರಿಗೆ ರೈಲ್ವೇ ಸೌಲಭ್ಯಗಳು ತುಂಬಾ ಅನುಕೂಲವಾಗಲಿದೆ. ತಿರುವನಂತಪುರಂ ನಿಜಾಮುದ್ದೀನ್ ಎಕ್ಸಪ್ರೆಸ್ ಮತ್ತು ಎರ್ನಾಕುಲಂ ನಿಜಾಮುದ್ಧಿನ್ ಎಕ್ಸ್‍ಪ್ರೆಸ್ ರೈಲುಗಳಿಗೆ ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿ ಕೇಂದ್ರ ಸಚಿವರು ಆದೇಶ ನೀಡಿದ್ದು, ಇವೆರಡು ರೈಲುಗಳು ಕುಂದಾಪುರದಲ್ಲಿ ನಿಲುಗಡೆ ನೀಡುತ್ತಿರುವುದರಿಂದ ಕೊಲ್ಲೂರಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರೈಲು ನಿಲುಗಡೆಗೆ ಶ್ರಮಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಮಿತಿ ವತಿಯಿಂದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸನ್ಮಾನಿಸಿ ಗೌರವಿಸಿದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ ಗೋಪಾಡಿ, ಪ್ರ.ಕಾರ್ಯದರ್ಶಿಗಳಾದ ಸುಧೀರ್ ಕೆ.ಎಸ್., ಸತೀಶ್ ಪೂಜಾರಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಕಾರ್ಯದರ್ಶಿ ಪ್ರವೀಣ್, ವಿವೇಕ ನಾಯಕ್, ರಾಜೇಶ ಕಾವೇರಿ, ಉದಯ ಭಂಡಾರ್‍ಕಾರ್, ತನ್ಮಯ್ ಭಂಡಾರ್‍ಕಾರ್, ನಾಗರಾಜ ಆಚಾರ್, ರಾಜು ಮೊಗವೀರ, ರಾಘವೇಂದ್ರ ಶೇಟ್, ಶ್ರೀಧರ ಸುವರ್ಣ, ಪದ್ಮನಾಭ ಶೆಣೈ, ಧರ್ಮಪ್ರಕಾಶ್, ಸರಸ್ವತಿ ಪುತ್ರನ್, ಕಲ್ಪನಾ ಭಾಸ್ಕರ್, ಆಶಾ, ಶಿವರಾಮ, ಕಂದಾವರ ಗ್ರಾಪಂ ಅಧ್ಯಕ್ಷೆ ಅನುಪಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here