ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಐಟಿ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ ಹಾಗೂ ಅಷ್ಟೇ ಪ್ರಮಾಣದ ಸವಾಲುಗಳಿವೆ. ವಿದ್ಯಾರ್ಥಿಗಳು ಔಚಿತ್ಯ ಪೂರ್ಣವಾಗಿ ಗ್ರಹಿಸಿ, ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕು. ಅದಕ್ಕೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಇವತ್ತಿನ ಸ್ಪರ್ಧಾ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ವೃತ್ತಿ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅಕಾಡೆಮಿಕ್ ಡೀನ್ ಗಿರಿರಾಜ್ ಭಟ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣ ಇಲ್ಲಿನ ಗಣಕ ವಿಜ್ಞಾನ ವಿಭಾಗವು ಏರ್ಪಡಿಸಿದ್ದ “ಐಟಿ ಭವಿಷ್ಯ ಎದುರಿಸುವುದು ಹೇಗೆ” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಐಟಿ ಕ್ಷೇತ್ರದಲ್ಲಿನ ಉದ್ಯೋಗ ಸಂದರ್ಶನಗಳನ್ನು ಯಶಸ್ವಿಯಾಗಿ ಎದುರಿಸುವ ತಂತ್ರಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರಸ್ತುತಿ ಪಡಿಸಿದರು. ಐಟಿ ಕ್ಷೇತ್ರದ ವೃತ್ತಿಗೆ ಪ್ರವೇಶಿಸುವ ವಿದ್ಯಾರ್ಥಿಗಳು ಹೊಂದಬೇಕಾದ ಪ್ರಮುಖ ಕೌಶಲ್ಯಗಳು, ಜವಾಬ್ದಾರಿಗಳು ಹಾಗೂ ನಿರಂತರ ಕಲಿಕೆಯ ಮಹತ್ವವನ್ನು ಅವರು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ವೆಂಕಟರಾಮ್ ಭಟ್ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳು ಪ್ರತಿದಿನವೂ ತಮ್ಮ ತಾಂತ್ರಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಬೆಳೆಸಿಕೊಳ್ಳಲು ಹೆಚ್ಚು ಸಮಯ ಮೀಸಲಿರಿಸಬೇಕು ಎಂದು ಸಲಹೆ ನೀಡಿದರು.
ಆಂತರಿಕ ಗುಣಮಟ್ಟ ಭರವಸ ಕೋಶದ ಸಂಯೋಜಕ ಡಾ. ವಸಂತ್ ಜಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಗಿರೀಶ್ ಶಾನಭೋಗ್ ಉಪಸ್ಥಿತರಿದ್ದರು.
ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಸುಬ್ರಮಣಿ ಸಿ. ಸ್ವಾಗತಿಸಿ, ಸರ್ವರನ್ನು ವಂದಿಸಿದರು. ಉಪನ್ಯಾಸಕಿ ಐಶ್ವರ್ಯ ಹಾಗೂ ಎಲ್ಲಾ ಬಿಸಿಎ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.